

ಶ್ರೀರಂಗಪಟ್ಟಣ: ಐತಿಹಾಸಿಕ ಹಾಗೂ ಪಾರಂಪರಿಕ ತಾಣವಾಗಿರುವ ಶ್ರೀರಂಗಪಟ್ಟಣದ ಕೋಟೆ ಕೊತ್ತಲಗಳನ್ನು ಪುರಾತತ್ವ ಇಲಾಖೆ ಸೂಕ್ತವಾಗಿ ನಿರ್ವಹಣೆ ಮಾಡದ ಕಾರಣ ಅಳಿವಿನಂಚಿಗೆ ತಲುಪಿದೆ. ಮಾತ್ರವಲ್ಲ ಈ ತಾಣಗಳು ಅನೈತಿಕ ಚಟುವಟಿಕೆಗಳಿಗೆ ನೆಲೆಯಾಗಿರುವುದು ಬೇಸರದ ಸಂಗತಿ.
ಹೌದು... ಒಂದು ಕಾಲದಲ್ಲಿ ವಿಜಯನಗರ ಸಾಮಂತರಿಂದ ಪಟ್ಟಣದ ಸುತ್ತ ಒಂದು ಸುತ್ತಿನ ರಕ್ಷಣಾ ಕೋಟೆ ನಿರ್ಮಾಣ ಮಾಡಲಾಗಿತ್ತು. ಇದು ಮೈಸೂರು ಅರಸರ ಮನೆತನ ಸೇರಿದಂತೆ ಹೈದರಾಲಿಯಿಂದ ನಿರ್ವಹಣೆಗೊಂಡಿತ್ತು.
ಟಿಪ್ಪು ಸುಲ್ತಾನ್ ಕಾಲದಲ್ಲಿ ಫ್ರೆಂಚ್ ತಂತ್ರಜ್ಞಾನ ಬಳಸಿ ನಿರ್ಮಾಣಗೊಂಡ 2ನೇ ಸುತ್ತಿನ ಕೋಟೆ ಮತ್ತು ಕಂದಕಗಳನ್ನು ಬ್ರಿಟಿಷ್ ಅಧಿಕಾರಿಗಳು ಸುಸಜ್ಜಿತವಾಗಿರಿಸಿ ಗತವೈಭವ ಕಾಪಾಡಿದ್ದರು. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಸಂರಕ್ಷಣಾ ವಿಭಾಗದ ಸುಪರ್ದಿಯಲ್ಲಿರುವ ಈ ಐತಿಹಾಸಿಕ ಕೋಟೆ ಮತ್ತು ಕಂದಕಗಳು ಇನ್ನೇನು ಕೆಲವೇ ವರ್ಷಗಳಲ್ಲಿ ಕುಸಿದು ಬೀಳುವ ಹಂತದಲ್ಲಿವೆ. ಅವ್ಯವಸ್ಥೆ ಹೀಗೆಯೇ ಮುಂದುವರಿದರೆ ಮುಂದಿನ ಪೀಳಿಗೆಗೆ ನಾವು ಪಳೆಯುಳಿಕೆಗಳನ್ನು ಮಾತ್ರ ತೋರಿಸಬೇಕಾಗುತ್ತದೆ.
ಪಟ್ಟಣದ ಸುತ್ತ ಇರುವ ಕೋಟೆ, ಕೋಟೆಯ ಮೇಲ್ಭಾಗ, ಕಂದಕ ಹಾಗೂ ಅದರ ಸುತ್ತಲೂ ಬೆಳೆದು ನಿಂತಿರುವ ಗಿಡಗಂಟಿಗಳನ್ನು ಪುರಾತತ್ವ ಇಲಾಖೆ ತೆರವು ಮಾಡದ ಕಾರಣ ಅವುಗಳ ಬಲಿಷ್ಠ ಬೇರುಗಳು, ಮುಳ್ಳಿನ ಬಳ್ಳಿಗಳಿಂದ ಕೋಟೆಯು ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ. ಇದೆಲ್ಲಾ ತಿಳಿದಿದ್ದರೂ ಇದಕ್ಕೂ ನಮಗೂ ಯಾವ ಸಂಬಂಧವಿಲ್ಲ ಎಂಬಂತೆ ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ಜೀವನದಿ ಕಾವೇರಿ ಎರಡು ದಿಕ್ಕಿನಲ್ಲಿ ಕವಲೊಡೆದು ಹರಿದು ಪಟ್ಟಣವನ್ನು ದ್ವೀಪ ನಗರಿಯನ್ನಾಗಿಸಿದ್ದಾಳೆ. ಈ ಸ್ಥಳದಲ್ಲಿ ಒಬೆಲಿಸ್ಕ್ ಸ್ತಂಭವಿದೆ. ಆಂಗ್ಲೋ-ಮೈಸೂರು ಕದನದಲ್ಲಿ ಪ್ರಾಣತೆತ್ತ ಬ್ರಿಟಿಷ್ ಸೈನಿಕರ ಹಾಗೂ ಸೇನಾ ಅಧಿಕಾರಿಗಳ ಹೆಸರುಗಳನ್ನು ನಮೂದಿಸಿ ಅವರ ಸ್ಮರಣಾರ್ಥ ಈ ಸ್ತಂಭವನ್ನು ಸ್ಥಾಪಿಸಲಾಗಿದೆ. ಪಟ್ಟಣದ ರೈಲ್ವೆ ನಿಲ್ದಾಣ ಸಮೀಪಕ್ಕೆ ರಾಜ್ಯ ಆಹಾರ ಧಾನ್ಯಗಳ ಸಂಗ್ರಹಿಸುವ ಉಗ್ರಾಣದ ಮಗ್ಗುಲಲ್ಲೇ ಇರುವ ತಾಣ ನಿರ್ಜನ ಪ್ರದೇಶವಾಗಿದೆ. ಪ್ರಕೃತಿ ಸೊಬಗು ಸವಿಯುವವರಿಗೆ ಇದು ಅತ್ಯಂತ ನೆಚ್ಚಿನ ತಾಣವಾಗಿದೆ. ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕಾಗಿ ಪಟ್ಟಣದ ಕೆಲವರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಧ್ಯಾಹ್ನ ಮತ್ತು ಸಂಜೆ ವೇಳೆ ಇದು ಪುಂಡರ ತಾಣವಾಗುತ್ತಿದೆ.
ಕಾನೂನು ಬಾಹಿರ ಚಟುವಟಿಕೆ: ಜೀವನದಿ ಕಾವೇರಿಯ ಮಗ್ಗುಲ್ಲಲ್ಲೇ ಇರುವ ಕೋಟೆ, ಕಂದಕಗಳು ನಿರ್ಜನ ಪ್ರದೇಶವಾಗಿದ್ದು, ಇಲ್ಲಿ ಸೊಂಪಾಗಿ ಗಿಡ ಗಂಟಿಗಳು ಬೆಳೆದಿವೆ. ಪೊದೆಗಳು ಅನೈತಿಕ ಚಟುವಟಿಕೆ ನಡೆಸುವ ತಾಣವಾಗಿದೆ. ಕಾಲೇಜು ಯುವಕ-ಯುವತಿಯರು ಈ ಸ್ಥಳಗಳಿಗೆ ಏಕಾಂತ ಬಯಸಿ ಆಗಮಿಸುವುದೂ ಇತ್ತೀಚೆಗೆ ಹೆಚ್ಚಾಗಿದೆ. ಇಂಥ ಸ್ಥಳಗಳನ್ನೇ ಇಸ್ಪೀಟು ಅಡ್ಡೆಗಳಾಗಿ ಮಾಡಿಕೊಂಡ ಪುಂಡರು ಮರಗಳ ಮರೆಗಳಲ್ಲಿ ಮದ್ಯ ವ್ಯಸನದೊಂದಿಗೆ ಅನೈತಿಕ ಚಟುವಟಿಕೆಗಳನ್ನೂ ನಡೆಸುತ್ತಾರೆ.
ಯುವ ಜೋಡಿಗಳು ಸಿಕ್ಕಾಗ ಅವರನ್ನು ಹೆದರಿಸಿ, ಬೆದರಿಸಿ ಹಣ ದೋಚುವ ಕೃತ್ಯಗಳೂ ಇಲ್ಲಿ ಆಗಾಗ್ಗೆ ನಡೆಯುತ್ತದೆ. ಮರ್ಯಾದೆ ಕಾರಣದಿಂದ ಯಾವುದೇ ಪ್ರಕರಣ ಅಥವಾ ದೂರುಗಳು ಠಾಣೆಯಲ್ಲಿ ದಾಖಲಾಗಿಲ್ಲ. ಹದಿಹರೆಯದ ಯುವಕರು ಗುಂಪಾಗಿ ಆಗಮಿಸಿ ಮದ್ಯ ಸೇವನೆ ಸೇರಿದಂತೆ ಮಾದಕ ವಸ್ತುಗಳನ್ನು ಸೇವಿಸಲು ಕೋಟೆ, ಕಂದಕ ಪ್ರದೇಶಗಳು ಬಳಕೆಯಾಗುತ್ತಿದೆ. ಈ ತಾಣಗಳಲ್ಲಿ ಗಿಡ ಗಂಟಿಗಳನ್ನು ತೆರವುಗೊಳಿಸಿ, ದಿನಕ್ಕೆ ಒಮ್ಮೆಯಾದರೂ ಪೊಲೀಸ್ ಬೀಟ್ ಹಾಕಿದರೆ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಬಹುದು.
ಮೈಸೂರು ರಾಜ್ಯ ಪುರಾತತ್ವ ಇಲಾಖೆ ಸಂರಕ್ಷಣಾ ವಿಭಾಗ ಎಇಇ ಮಹೇಶ್ ಪ್ರತಿಕ್ರಿಯಿಸಿ, ಕೋಟೆ ಹಾಗೂ ಕಂದಕಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ಕತ್ತರಿಸಿ ತೆರವು ಮಾಡುವ ಕ್ರಮಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ ಕ್ರಿಯಾ ಯೋಜನೆ ಪಟ್ಟಿ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರ ಹಣ ಬಿಡುಗಡೆಗೊಳಿಸಿದ ತಕ್ಷಣವೇ ತೆರವು ಕ್ರಮ ಕೈಗೊಳ್ಳಲಾಗುತ್ತದೆ. ಕೋಟೆಯ ದುರಸ್ತಿ ಹಾಗೂ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಶೀಘ್ರವೇ ಜಾರಿಯಾಗಲಿದೆ ಎಂದರು.