ಅಸಡ್ಡೆ ಮಾತುಗಳನ್ನಾಡಿದ ರಮೇಶ ಬಂಡಿಸಿದ್ದೇಗೌಡ: ಶ್ರೀರಂಗಪಟ್ಟಣ ಹೋರಾಟಗಾರರ ಅಸಮಾಧಾನ

Srirangapatna Farmers Press Conference Mandya
Published on

ಮಂಡ್ಯ: ಶ್ರೀರಂಗಪಟ್ಟಣ-ಕುಶಾಲನಗರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಸರ್ವೀಸ್ ರಸ್ತೆ ಮಾಡಿಕೊಡಬೇಕೆನ್ನುವ ರೈತರ ಮನವಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಕನಿಷ್ಟ ಸ್ಪಂದನೆ ನೀಡಲಿಲ್ಲ. ಆದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ರವೀಂದ ಶ್ರೀಕಂಠಯ್ಯ ನಮ್ಮೊಂದಿಗೆ ನಿಂತು ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದಾರೆಂದು ಹೋರಾಟಗಾರಾದ ಚಂದನ್ ಹಾಗೂ ಸುನೀಲ್ ಬೆಳಗೊಳ ತಿಳಿಸಿದರು.

ಸರ್ವೀಸ್ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ದಿನದಿಂದ ಹೋರಾಟ ಮಾಡಲಾಗುತ್ತಿದೆ. ಹೆದ್ದಾರಿ ಕಾಮಗಾರಿಗೆಂದು ಎಲ್ಲ ಪಕ್ಷದ ರೈತರು ಜಮೀನು ಕಳೆದುಕೊಂಡಿದ್ದಾರೆ. ಶ್ರೀರಂಗಪಟ್ಟಣ, ಪಾಲಹಳ್ಳಿ, ಬೆಳಗೊಳ, ಮಜ್ಜಿಗೆಪುರ, ಕೆಆರ್‌ಎಸ್ ಸೇರಿದಂತೆ ಹಲವು ಗ್ರಾಮದ ನೂರಾರು ರೈತರು ಭೂಮಿ ನೀಡಿದ್ದಾರೆ. ಹೆದ್ದಾರಿಯಿಂದಾಗಿ ಜಮೀನು ಎರಡು ಭಾಗವಾಗಿದೆ. ಸರ್ವೀಸ್ ರಸ್ತೆ ಮಾಡಿಕೊಡದಿದ್ದರೆ ಕೃಷಿ ಮಾಡುವುದಾದರೂ ಹೇಗೆ?. ಈ ಬಗ್ಗೆ ಕೇಳಿದರೆ ರಮೇಶ ಬಂಡಿಸಿದ್ದೇಗೌಡ ರೈತರ ಬಗ್ಗೆ ಅಸಡ್ಡೆ ಮಾತುಗಳನ್ನಾಡಿದರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ರವೀಂದ ಶ್ರೀಕಂಠಯ್ಯ ಅವರಿಗೆ ತಿಳಿಸಿ ಎಚ್‌ಡಿಕೆ ಅವರನ್ನು ಭೇಟಿ ಮಾಡಿಸಿದರು ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಾರಂಭದ ದಿನದಲ್ಲಿ ಸರ್ವೀಸ್ ರಸ್ತೆ ಮಾಡಿಕೊಡುವ ಭರವಸೆ ನೀಡಲಾಗಿತ್ತು. ಆದರೆ ಡಿಪಿಆರ್ ನೋಡಿದರೆ ಸರ್ವೀಸ್ ರಸ್ತೆಯೇ ಇರಲಿಲ್ಲ. ಇದು ರೈತರಿಗೆ ಆಘಾತ ತಂದಿತ್ತು. ಈ ನಡುವೆ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಸರ್ವೀಸ್ ರಸ್ತೆ ಮಾಡಿಕೊಡಿದ್ದರೆ ಬೆಳೆ ಸಾಗಾಣಿಕೆ ಮಾಡುವುದಾದರೂ ಹೇಗೆ?. ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಲಾಯಿತು. ಆದರೆ ನಮ್ಮ ಮನವಿಗೆ ಶಾಸಕರು ಕನಿಷ್ಟ ಮನ್ನಣೆ ಕೊಡಲಿಲ್ಲ. ಇದು ಯಾವುದೋ ಪಕ್ಷದ ಕೆಲಸವಲ್ಲ. ಎಲ್ಲ ಪಕ್ಷದಲ್ಲಿ ಗುರುತಿಸಿಕೊಂಡಿರುವವರು ಭೂಮಿ ಕೊಟ್ಟಿದ್ದಾರೆ. ಆದಾಗ್ಯೂ ಶಾಸಕರು ಯೋಜನೆ ಪರವಾಗಿಯೇ ಮಾತನಾಡಿದ್ದು ಬೇಸರ ತರಿಸಿತು ಎಂದರು.

ಈ ವಿಚಾರದಲ್ಲಿ ಎಚ್‌ಡಿಕೆ ಹಾಗೂ ರವೀಂದ್ರ ಶ್ರೀಕಂಠಯ್ಯ ರೈತರ ಬೆನ್ನಿಗೆ ನಿಂತರು. ಆರೋಗ್ಯ ಸರಿಯಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದರೂ ಎಚ್‌ಡಿಕೆ ನಮ್ಮೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಮಾತ್ರವಲ್ಲದೆ ರೈತರ ನಿಯೋಗ ದೆಹಲಿಗೆ ಹೋದಾಗ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿತು. ಎಚ್‌ಡಿಕೆ ಹಾಗೂ ರವೀಂದ್ರ ಶ್ರೀಕಂಠಯ್ಯ ಅವರೇ ಖುದ್ದು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿಸಿ ಸಮಸ್ಯೆಯನ್ನು ತಿಳಿಸಿದರು. ಅದಕ್ಕೆ ಸ್ಪಂದಿಸಿದ ಸಚಿವರು ಸರ್ವೀಸ್ ರಸ್ತೆ ಮಾಡಿಸಿಕೊಡುವುದಾಗಿ ತಿಳಿಸಿದ್ದಾರೆಂದು ವಿವರಿಸಿದರು.

ಹೋರಾಟಗಾರರಾದ ಅಶ್ವಥ್ ನಾರಾಯಣ್, ಗಿರೀಶ್, ಸುನೀಲ್, ಪ್ರಭಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net