ಶ್ರೀರಂಗಪಟ್ಟಣ ದಸರಾದಲ್ಲೇ ಕಾವೇರಿ ಆರತಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

Srirangapatna Dussehra Logo Launched Mandya
Published on

ಮಂಡ್ಯ: ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಮಹೋತ್ಸವ ಅ.4ರಿಂದ 7ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಅದರಂತೆ ಈ ಬಾರಿ ಕಾರ್ಯಕ್ರಮದಲ್ಲಿ ಕಾವೇರಿ ಆರತಿಗೂ ಚಾಲನೆ ನೀಡಲು ಚಿಂತಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ-2024ರ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಹರಿದ್ವಾರ ಮತ್ತು ವಾರಣಾಸಿಯಲ್ಲಿ ನಡೆಯವ ಗಂಗಾರತಿಯು ಹಲವಾರು ವರ್ಷಗಳ ಇತಿಹಾಸ ಹೊಂದಿದೆ. ಗಂಗಾರತಿಯ ಶೈಲಿಯಲ್ಲಿಯೇ ಕಾವೇರಿ ಆರತಿಯನ್ನು ಕೆಆರ್‌ಎಸ್‌ನಲ್ಲಿ ಪ್ರಾರಂಭಿಸಲಾಗುವುದು. ಈ ನಿಟ್ಟಿನಲ್ಲಿ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮದಲ್ಲೇ ಪ್ರಾರಂಭಿಸಲು ಚಿಂತಿಸಲಾಗುತ್ತಿದೆ. ಈ ಸಂಬಂಧ ಸೆ.20ರಿಂದ ಹರಿದ್ವಾರ ಮತ್ತು ವಾರಣಾಸಿಗೆ 28 ಜನರ ನಿಯೋಗ ತೆರಳಲಿದೆ. ಅಲ್ಲಿಂದ ಬಂದ ನಂತರ ಕಾವೇರಿ ಮಾತೆಗೆ ಗಂಗಾರತಿ ಸಲ್ಲಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ನಾಡಿನ ದಸರಾ ಹಬ್ಬವು ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು, ನಮ್ಮ ನಾಡಿನ ಕಲ್ಯಾಣಕ್ಕೋಸ್ಕರ ಚಾಮುಂಡೇಶ್ವರಿ ತಾಯಿಯನ್ನು ಪೂಜಿಸಲಾಗುವುದು. ಅದೇ ರೀತಿ ಶ್ರೀರಂಗಪಟ್ಟಣ ದಸರಾ ಹಬ್ಬದಲ್ಲಿ ಅನೇಕ ರೀತಿಯ ವಿಭಿನ್ನ ಸಾಂಸ್ಕೃತಿಕ ಉತ್ಸವಗಳು ನಡೆಯಲಿದ್ದು, ಸಾರ್ವಜನಿಕರಿಗೆ ಹಬ್ಬದ ವಾತಾವರಣ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ನಮ್ಮ ನಾಡಿನ ಪರಂಪರೆಯನ್ನು ಉಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಹಿಂದಿನಂತೆ ಈ ಬಾರಿಯೂ ಶ್ರೀರಂಗಪಟ್ಟಣ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಸಮಿತಿ ರಚನೆ ಮಾಡಲಾಗಿದೆ ಎಂದರು.
ಶ್ರೀರಂಗಪಟ್ಟಣ ಶಾಸಕರೂ ಆದ ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಶಾಸಕ ರವಿಕುಮಾರ್ ಗಣಿಗ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net