ಸೆ.25ರಿಂದ ಶ್ರೀರಂಗಪಟ್ಟಣ ದಸರಾ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ

Srirangapatna Dasara Pre-meeting Mandya
Published on

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಸೆ.25 ರಿಂದ 28ರವರಗೆ ಶ್ರೀರಂಗಪಟ್ಟಣ ದಸರಾ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ವಿಭಿನ್ನವಾಗಿ ಜನರನ್ನು ಆಕರ್ಷಿಸುವ ರೀತಿ ಇರಲಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮದ ಮೆರವಣಿಗೆಗೆ ಸೆ.25ರಂದು ಮಧ್ಯಾಹ್ನ 3 ಗಂಟೆಗೆ ಚಾಲನೆ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಶ್ರೀರಂಗನಾಥ ದೇವಸ್ಥಾನದ ಮುಂಭಾಗದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದರು.

ದಸರಾ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಕಾರ್ಯಕ್ರಮಗಳಲ್ಲಿ ನಮ್ಮ ಇತಿಹಾಸ ಹಾಗೂ ಸಂಸ್ಕೃತಿಗಳ ಹಿನ್ನಲೆ ಹೊಂದಿರಲಿ. ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ವಿವಿಧ ವಯೋಮಿತಿಗಳ ಜನರು ಭಾಗವಹಿಸುವ ರೀತಿ ಕಾರ್ಯಕ್ರಮಗಳನ್ನು ಅಧಿಕಾರಿಗಳು ವೈವಿದ್ಯಮಯವಾಗಿ ರೂಪಿಸಿ. ಒಟ್ಟಾರೆ ದಸರಾ ಕಾರ್ಯಕ್ರಮಗಳನ್ನು ಯಾವುದೇ ಲೋಪವಿಲ್ಲದಂತೆ ಅಚ್ಚುಕಟ್ಟಾಗಿ ಸಂಘಟಿಸಿ ಎಂದು ಸೂಚನೆ ನೀಡಿದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ದಸರಾ ಅಂಗವಾಗಿ ಹಾಲು ಕರೆಯುವ ಸ್ಪರ್ಧೆ ಜತೆಗೆ ಈ ಬಾರಿ ರಾಸುಗಳ ಪ್ರದರ್ಶನ ಏರ್ಪಡಿಸಿ ಬಹುಮಾನ ವಿತರಣೆ ಮಾಡಬೇಕು. ಕಿರಂಗೂರು ಬನ್ನಿಮಂಟಪದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಂಡು ಸಿದ್ಧತೆಗಳನ್ನು ಪ್ರಾರಂಭಿಸಿ. ಯೋಗ ದಸರಾದಲ್ಲಿ ಯೋಗ ಪ್ರದರ್ಶನದೊಂದಿಗೆ ಸ್ಪರ್ಧೆಗಳನ್ನು ಸಹ ಆಯೋಜಿಸಿ. ಶಿಕ್ಷಣ ಇಲಾಖೆ ಅವರು ಯೋಗ ಸ್ಪರ್ಧೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮಗಳ ಆಯೋಜನೆಗಾಗಿ ಸ್ವಾಗತ, ಕ್ರೀಡಾ, ವೇದಿಕೆ, ಮೆರವಣಿಗೆ, ಆರೋಗ್ಯ, ನಗರ ಅಲಂಕಾರ, ಹಣಕಾಸು, ಸ್ವಚ್ಛತೆ, ಆಹಾರ, ಆಹಾರ ಮೇಳ, ವಸ್ತು ಪ್ರಸರ್ಶನ, ಸಾಂಸ್ಕೃತಿಕ ಕಾರ್ಯಕ್ರನ ಸೇರಿದಂತೆ ವಿವಿಧ ಉಪಸಮಿತಿಗಳನ್ನು ರಚಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಸ್ತು ಪ್ರದರ್ಶನ ಸಮಿತಿಯಿಂದ ಅನಾವರಣಗೊಳಿಸಲಾಗುವ ಮಳಿಗೆಗಳಲ್ಲಿ ಅರ್ಧದಷ್ಟು ಮಳಿಗೆಗಳನ್ನು ಆಹಾರ ಮೇಳಕ್ಕೆ ನೀಡಲಾಗುವುದು. ಇಲ್ಲಿ ವಿವಿಧ ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಪಾಂಡವಪುರ ಉಪವಿಭಾಗಾಕಾರಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net