

ಮಂಡ್ಯ: ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮವನ್ನು ಈ ಬಾರಿ ಬಹಳ ಅದ್ದೂರಿಯಾಗಿ, ಸಂಪ್ರದಾಯಿಕ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸೋಣ. ಅ.4 ರಿಂದ 6ರವರೆಗೆ 3 ದಿನ ಅಥವಾ ಅ.4 ರಿಂದ 8 ರವರೆಗೆ 5 ದಿನ ನಡೆಸಬೇಕೆಂದು ಯೋಜಿಸಲಾಗುತ್ತಿದೆ. ಎಷ್ಟು ದಿನ ಆಚರಣೆ ಮಾಡಬೇಕೆಂದು ಶೀಘ್ರವೇ ನಿರ್ಧಾರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀರಂಗಪಟ್ಟಣ ದಸರಾ ಆಚರಣೆಯ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಮಿತಿ, ಆಹಾರ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ವಸ್ತು ಪ್ರದರ್ಶನ ಸಮಿತಿ, ಸ್ವಚ್ಛತಾ ಮತ್ತು ನೈರ್ಮಲ್ಯ ಸಮಿತಿ, ಕ್ರೀಡಾ ಸಮಿತಿ, ಅಲಂಕಾರ ಸಮಿತಿ, ಹಣಕಾಸು ಸಮಿತಿ, ಆಹಾರ ಸಮಿತಿಗಳನ್ನು ಒಳಗೊಂಡಂತೆ ಮುಂತಾದ ಸಮಿತಿ ರಚಿಸಲಾಗಿದೆ. ಎಲ್ಲ ಸಮಿತಿಯು ತಮಗೆ ನೀಡಿರುವ ಜವಾಬ್ದಾರಿಗಳನ್ನು ವಿಳಂಬ ಮಾಡದೆ ಇಂದಿನಿಂದಲೇ ಯೋಜನೆ ಸಿದ್ದಪಡಿಸಿ ಎಂದರು.
ಸಾಂಸ್ಕೃತಿಕ ಸಮಿತಿಯ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಸಮಿತಿಯಲ್ಲಿ ಅನುಮೋದನೆಗೊಳ್ಳದಿರುವವರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲದ ಕಾರಣ ನಿರ್ದೇಶನದಂತೆ ಕೆಲಸ ಮಾಡಿ. ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ವೇದಿಕೆ ಸಮಿತಿಯು ಬನ್ನಿ ಮಂಟಪದಲ್ಲಿ ಆಯೋಜಿಸುವ ಜಂಬೂಸವಾರಿ ಕಾರ್ಯಕ್ರಮಕ್ಕೂ ವೇದಿಕೆ ನಿರ್ಮಾಣ ಮಾಡಬೇಕು. ಇದಲ್ಲದೆ ಮಕ್ಕಳ ಚಲನಚಿತ್ರೋತ್ಸವವನ್ನು ಏರ್ಪಡಿಸಬೇಕು. ಆದ್ದರಿಂದ ಉತ್ತಮ ಸಂದೇಶ ನೀಡುವಂತಹ ಚಲನಚಿತ್ರಗಳು ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳಬೇಕು ಎಂದು ತಿಳಿಸಿದರು.
ಹಣಕಾಸು ಸಮಿತಿ ಕಾರ್ಯಕ್ರಮವು ಮುಗಿದ ಒಂದು ವಾರದೊಳಗೆ ಕಲಾವಿದರ ಸಂಭಾವನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ನೀಡಬೇಕಾದ ಬಿಲ್ಗಳ ಹಣ ಪಾವತಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ವಹಿಸಬಾರದು. ಮೆರವಣಿಗೆ ಸಮಿತಿಯು ರೂಟ್‌ಮ್ಯಾಪ್ ಅನ್ನು ಸಿದ್ದಪಡಿಸಿಕೊಳ್ಳಿ. ಮೆರವಣಿಗೆ ಹೋಗುವ ಮಾರ್ಗಗಳಲ್ಲಿ ಗುಂಡಿಗಳಿದ್ದರೆ ಅವುಗಳನ್ನು ಸರಿಪಡಿಸಿ. ವಿದ್ಯುತ್ ತಂತಿಗಳು ಹಾದುಹೋಗಿರುವಲ್ಲಿ ಸೂಕ್ತ ಕ್ರಮ ಕೈಗೊಳ್ಳಿ. ವಸ್ತು ಪ್ರದರ್ಶನ ಸಮಿತಿಯಲ್ಲಿ ಕಳೆದ ವರ್ಷ ಕಾರ್ಯ ನಿರ್ವಹಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನೇ ನೇಮಕ ಮಾಡಲಾಗಿದೆ. ಆದ್ದರಿಂದ ಆದಷ್ಟು ಬೇಗ ನಿಮಗೆ ನೀಡಿರುವ ಜವಾಬ್ದಾರಿ ಹಾಗೂ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿ ಎಂದು ಸೂಚಿಸಿದರು.
ವಸ್ತು ಪ್ರದರ್ಶನದಲ್ಲಿ ಒಟ್ಟು 200 ಮಳಿಗೆ ಹಾಕಲಾಗುವುದು. ಅದರಲ್ಲಿ 50 ಮಳಿಗೆಗಳು ಆಹಾರಕ್ಕೆ ಸೀಮಿತವಾಗಿದ್ದು, ಪ್ರತಿ ಜಿಲ್ಲೆಯಿಂದಲೂ ಕೂಡ ಆಯಾ ಜಿಲ್ಲೆಯ ವಿಶೇಷ ಖಾದ್ಯಗಳು, ತಿಂಡಿ ತಿನಿಸುಗಳನ್ನು ತಯಾರಿಸಬೇಕು. ಇನ್ನುಳಿದ 150 ಮಳಿಗೆಯನ್ನು ವಿಭಿನ್ನ ರೀತಿಯ ವಸ್ತು ಪ್ರದರ್ಶನಕ್ಕೆ ಮೀಸಲಿಡಿ. ಆಹಾರ ಮಳಿಗೆಗಳ ಬಳಿ ಕಡ್ಡಾಯವಾಗಿ ಕಸದ ಬುಟ್ಟಿಗಳನ್ನು ಇಡಿ ಸ್ವಚ್ಛತೆಯನ್ನು ಕಾಪಾಡಬೇಕು. ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಮಿತಿ ವೈದ್ಯರು ಹಾಗೂ ಸಿಬ್ಬಂದಿ ವರ್ಗವನ್ನು ನೇಮಕ ಮಾಡಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿ ನೋಡಿಕೊಳ್ಳಬೇಕು. ಆದ್ದರಿಂದ ಪ್ರತಿ ಮಳಿಗೆ ಹಾಗೂ ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಬಹುಮುಖ್ಯ. ವಿದ್ಯುತ್ ಮತ್ತು ಅಲಂಕಾರ ಸಮಿತಿ ಕಾರ್ಯಕ್ರಮದಲ್ಲಿ ಉತ್ತಮ ಮಟ್ಟದ ವಿದ್ಯುತ್ ದೀಪಾಲಂಕಾರದಿಂದ ಸಾರ್ವಜನಿಕರು ಆಕರ್ಷಣಿಯವಾಗುವಂತೆ ಕಾರ್ಯ ನಿರ್ವಹಿಸಿ. ಈ ಬಗ್ಗೆ ಸಮಿತಿಯ ಸದಸ್ಯರನ್ನೊಳಗೊಡಂತೆ ಚರ್ಚಿಸಿ. ಕ್ರೀಡಾ ಮತ್ತು ಯೋಗ ದಸರಾ ಸಮಿತಿ ಯಾವ ದಿನದಂದು ಏನೇನು ಕಾರ್ಯಕ್ರಮ ನಡೆಸಬೇಕು ಎಂದು ಒಂದು ವರದಿ ತಯಾರಿಸಬೇಕು. ದಸರಾದಲ್ಲಿ ನಡೆಯುವ ಕವಿಗೋಷ್ಠಿ, ಮಕ್ಕಳ ಚಲನಚಿತ್ರೋತ್ಸವ, ಯೋಗ, ಮ್ಯಾರಥಾನ್ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ಅದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ವಿವರಿಸಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್ಪಿ ಮುರುಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಇತರರಿದ್ದರು.