ಐದು ದಿನ ಶ್ರೀರಂಗಪಟ್ಟಣ ದಸರಾ: ಉದ್ಘಾಟನೆಗೆ ಎಚ್‌ಡಿಡಿ, ಸಿಎಫ್‌ಟಿಆರ್‌ಐ ನಿರ್ದೇಶಕರ ಹೆಸರು

WhatsApp Image 2022-08-29 at 1.26.17 PM
Published on

ಮಂಡ್ಯ: ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ಶ್ರೀರಂಗಪಟ್ಟಣದ ಪಾರಂಪರಿಕ ದಸರಾ ಹಬ್ಬವನ್ನು ಐದು ದಿನ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಅಂತೆಯೇ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಥವಾ ಸಿಎಫ್‌ಟಿಆರ್‌ಐ ನಿರ್ದೇಶಕರನ್ನು ಆಹ್ವಾನಿಸಲು ಸಲಹೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೆ.28ರಿಂದ ಆ.2ರವರೆಗೆ ದಸರಾವನ್ನು ವೈಶಿಷ್ಟೃ ಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ದಸರಾ ಸಮಿತಿಯಿಂದ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಇನ್ನೊಂದು ಕೋಟಿ ರೂ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳ ನೆರವು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಬ್ಬದ ಯಶಸ್ಸಿಗೆ ಶ್ರಮಿಸಬೇಕು ಎಂದರು.
ದಸರಾ ವೈಭವವನ್ನು ಹೆಚ್ಚಿಸಲು ನಾಲ್ಕೈದು ಆನೆಗಳನ್ನು ಕರೆಸುವುದು. ಪೊಲೀಸ್ ಬ್ಯಾಂಡ್, ಕಲಾತಂಡ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿಗೆ ಜತೆ ವೇದಿಕೆಯಲ್ಲಿ ಮಹಿಳಾ, ರೈತ, ಯುವ ದಸರಾ ಹಾಗೂ ಯೋಗ ಪ್ರದರ್ಶನ ಆಯೋಜನೆ ಮಾಡಬೇಕು. ಪ್ರಸಿದ್ದ ಪ್ರವಾಸಿ ತಾಣ ಕೃಷ್ಣರಾಜಸಾಗರದ ವೈಭವವನ್ನು ಪ್ರವಾಸಿಗರಿಗೆ ಉಣಬಡಿಸಲು ವಿಶೇಷ ದೀಪಾಲಂಕಾರ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಶಾಸಕರಾದ ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್, ಸುರೇಶ್‌ಗೌಡ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಒ ಶಾಂತಾ ಎಲ್. ಹುಲ್ಮನಿ, ಜಿಲ್ಲಾ ಎಸ್ಪಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜ್ಯೋತಿಷಿ ಡಾ.ಭಾನುಪ್ರಕಾಶ್‌ಶರ್ಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net