ಸೆಪ್ಟಂಬರ್‌ನಲ್ಲಿ ಶ್ರೀರಂಗಪಟ್ಟಣ ದಸರಾ: ಈ ಬಾರಿ ಏಳು ದಿನ ಆಚರಣೆ

Srp Dasara
Published on

ಮಂಡ್ಯ: ಸೆಪ್ಟಂಬರ್ ಕೊನೆಯ ವಾರದಲ್ಲಿ ಶ್ರೀರಂಗಪಟ್ಟಣ ದಸರಾ ಆಯೋಜಿಸಲಾಗುವುದು. ಈ ಬಾರಿ ಏಳು ದಿನ ವಿಜೃಂಭಣೆಯಿಂದ ಆಚರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ, ಮಹಿಳಾ, ಯೋಗ, ರೈತ, ಕ್ರೀಡಾ, ಯುವ, ಉದ್ಯೋಗ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಧಿಕಾರಿಗಳು ವಿನೂತನವಾಗಿ ಕಾರ್ಯಕ್ರಮ ಆಯೋಜಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಎಂದರು.
ಹಾಲು ಕರೆಯುವ ಸ್ಪರ್ಧೆ, ಕಬ್ಬಡಿ, ಖೋಖೋ, ಚೆಸ್, ವಾಲಿಬಾಲ್, ವಾಟಟ್ ಸ್ಪೋರ್ಟ್ಸ್, ವಿಚಾರ ಗೋಷ್ಠಿ, ಕವಿಗೋಷ್ಠಿ ವಿಶೇಷವಾಗಿ ದೀಪಾಲಂಕಾರ, ಕೆಆರ್‌ಎಸ್‌ನಲ್ಲಿ ಬೋಟಿಂಗ್, ಟೂರಿಸಂ ಮ್ಯಾಪ್ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು. ಒಟ್ಟಾರೆ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕ್ರಮವಹಿಸಿ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶಾಂತಾ ಎಂ. ಹುಲ್ಮನಿ, ಜಿಲ್ಲಾ ಎಸ್ಪಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net