

ಮೈಸೂರು: ಈ ಬಾರಿ ಶ್ರೀರಂಗಪಟ್ಟಣ ದಸರಾಗೆ ಐದು ಆನೆಗಳನ್ನು ಕಳುಹಿಸುವಂತೆ ಸರ್ಕಾರ ಸೂಚಿಸಿದೆ. ಆದರೆ ಇಲಾಖೆಯಿಂದ ಇನ್ನೂ ಅಂತಿಮವಾಗಿಲ್ಲ ಎಂದು ಡಿಸಿಎಫ್ ಡಾ. ವಿ.ಕರಿಕಾಳನ್ ಮಾಹಿತಿ ನೀಡಿದರು.
ಫಿರಂಗಿ ತಾಲೀಮಿನ ಬಳಿಕ ಮಾತನಾಡಿದ ಅವರು, ಶ್ರೀರಂಗಪಟ್ಟಣ ದಸರೆಗೆ 5 ಆನೆಗಳು ಬೇಕು ಎಂದು ಕೇಳಿದ್ದಾರೆ. ಅರಣ್ಯ ಇಲಾಖೆ ಮುಖ್ಯಸ್ಥರಿಂದ ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿಲ್ಲ. ಆನೆಗಳನ್ನು ಕಳುಹಿಸಬೇಕಾದರೆ ಈ ಬಾರಿ ಎಸ್‌ಒಪಿ ಸಿದ್ಧಪಡಿಸಿದ್ದು, ಆನೆಗಳ ಸುತ್ತಲೂ 10 ಅಡಿ ಅಂತರದಲ್ಲಿ ಯಾರೂ ಬಾರದಂತೆ ಜಾಗ್ರತೆ ವಹಿಸಬೇಕು. ಪಟಾಕಿ ಸಿಡಿಸುವುದು, ಡ್ರೋನ್ ಬಳಸುವುದು, ಜನರು ಹತ್ತಿರ ಬರುವುದನ್ನು ನಿಷೇಧಿಸಿದ್ದೇವೆ. ನಮ್ಮ ವೈದ್ಯರು, ಸಿಬ್ಬಂದಿ ಅಲ್ಲಿ ಇರಲಿದ್ದಾರೆ. ಈ ಬಾರಿ ಮಹೇಂದ್ರ ಜತೆಗೆ ಎರಡು ಹೆಣ್ಣಾನೆ ಕಳುಹಿಸಲು ಚಿಂತಿಸಲಾಗಿದ್ದು, ಅಗತ್ಯವಿದ್ದರೆ ಮತ್ತೆರಡು ಗಂಡಾನೆಗಳನ್ನು ಜತೆಗೆ ಕಳುಹಿಸಲಾಗುವುದು ಎಂದರು.
ಅಭಿಮನ್ಯು, ಮಹೇಂದ್ರ ರೆಡಿ: ದಸರಾ ಜಂಬೂಸವಾರಿಗೆ ಅಭಿಮನ್ಯು ಆನೆ ಮತ್ತು ಮಹೇಂದ್ರನಿಗೆ ಮರಳಿನ ಮೂಟೆ ತಾಲೀಮು ನಡೆಸಿದ್ದೇವೆ. ಸದ್ಯಕ್ಕೆ ಅಂಬಾರಿ ಹೊರಲು ಅಭಿಮನ್ಯು ಮತ್ತು ಮಹೇಂದ್ರ ಅಣಿಯಾಗಿವೆ. ಪಟ್ಟದಾನೆಗಳಾಗಿ ಕಳೆದ ಬಾರಿ ಧನಂಜಯ ಮತ್ತು ಗೋಪಾಲಸ್ವಾಮಿಯನ್ನು ಕಳುಹಿಸಿದ್ದೆವು. ಈ ಬಾರಿ ಧನಂಜಯ ಮತ್ತು ಭೀಮ ಆನೆಯನ್ನು ಕಳುಹಿಸಲಾಗುವುದು ಎಂದು ಹೇಳಿದರು.