ಬೋರೇದೇವರ ದೇಗುಲದಲ್ಲಿ ಹತ್ತಾರು ದೇವರುಗಳ ಸಂಗಮ

31 Sri 1- Ugadi
Published on

 ಬೇವು-ಬೆಲ್ಲದ ಪ್ರಸಾದ ವಿತರಣೆ

ಶ್ರೀರಂಗಪಟ್ಟಣ: ತಾಲೂಕಿನ ಮಂಡ್ಯದಕೊಪ್ಪಲು ಸಮೀಪದ ಪ್ರಸಿದ್ದ ಕಾವೇರಿ ಬೋರೇದೇವರ ದೇಗುಲದಲ್ಲಿ ಹತ್ತಾರು ಗ್ರಾಮಗಳ ದೈವಗಂ ಸಂಗಮದೊಂದಿಗೆ ನೂತನ ವರ್ಷ ಯುಗಾದಿ ಹಬ್ಬದ ಸಂಭ್ರಮದ ಪೂಜಾದಿಗಳು ಸಾಂಪ್ರದಾಯಿಕವಾಗಿ ಸಂಪನ್ನಗೊಂಡವು. ಕಾವೇರಿ ನದಿ ತೀರದ ದೇಗುಲದಲ್ಲಿ ಭಾನುವಾರ ಮುಂಜಾನೆಯಿಂದಲೇ ಬೋರೆದೇವರಿಗೆ ಲೋಕಕಲ್ಯಾಣಾರ್ಥ ಮಡಿಪೂಜೆ, ವಿಶೇಷ ಪೂಜಾಚರಣೆ ಸಹಿತ ಪಂಚಾಮೃತ ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಿ ಬಳಿಕ ಭಕ್ತರಿಗೆ ಬೇವು-ಬೆಲ್ಲದ ಪ್ರಸಾದ ವಿತರಿಸಲಾಯಿತು. ಬಳಿಕ ದೇವಾಲಯ ಹಿಂಭಾಗದ ಜೀವನದಿ ಕಾವೇರಿ ನದಿ ತೀರದಲ್ಲಿ ಕೊಡಿಯಾಲ ಮತ್ತು ತಡಗವಾಡಿ ಗ್ರಾಮಗಳ ಬೋರೇದೇವರು,ಅರಕೆರೆ ಗ್ರಾಮದ ಬಿಸಿಲು ಮಾರಮ್ಮ, ಆಲಗೂಡು ಗ್ರಾಮದ ಸಿದ್ದೇಶ್ವರ, ದೊಳ್ಳಯ್ಯ ಮತ್ತು ಬೀರೇಶ್ವರ, ಹುಂಜನಕೆರೆ ಗ್ರಾಮದ ಚೆನ್ನಿಗರಾಯಸ್ವಾಮಿ, ಬಳ್ಳೆಕೆರೆ ಗ್ರಾಮದ ಹುಚ್ಚುರಾಯಸ್ವಾಮಿ,ಅಲ್ಲಾಪಟ್ಟಣ ಗ್ರಾಮದ ಅಂದಾ ನೇಶ್ವರ ಹಾಗೂ ಬೀರೇಶ್ವರ,ಮಂಡ್ಯ ತಾಲೂಕಿನ ಕಸಲಗೆರೆ ಮತ್ತೀಕೆರೆ ಬೀರೆಶ್ವರ, ಉರು ಮಾರಕ ಸಲಗೆರೆಯಿಂದ ಉರು ಮಾರಮ್ಮ, ಚಂದಗಾಲು ಗ್ರಾಮದ ಚಿತ್ತಾನಳ್ಳಿಯಮ್ಮ, ಕಾಳಿ ಸಿದ್ದನಹುಂಡಿ ಗ್ರಾಮದ ಬೀರೇಶ್ವರ ಹಾಗೂ ಸಿದ್ದೇಶ್ವರ ಸೇರಿದಂತೆ ಹತ್ತಾರು ಗ್ರಾಮಗಳ ದೇವರುಗಳ ಸಂಗಮವಾಗಿತ್ತು. ದೇವರ ಗುಡ್ಡಪ್ಪಂದಿರು ಎಲ್ಲ ದೇವರಿಗೂ ಸರ್ವಾಲಾಂಕೃತಗೊಳಿಸಿ ಸಾಂಪ್ರದಾಯಿಕ ಪೂಜೆಗಳನ್ನು ಅರ್ಪಿಸಿದರು.

ಪಾನಕ- ಮಜ್ಜಿಗೆ ವಿತರಣೆ: ಮಡಿನೀರು ಸಹಿತ ಹೂವು-ಹೊಂಬಾಳೆ ಪೂಜೆಯೊಂದಿಗೆ ಜಾನಪದ ಕಲಾತಂಡಗಳು ಹಾಗೂ ತಮಟೆ -ನಗಾರಿ ಸದ್ದಿನೊಂದಿಗೆ ಮೆರವಣಿಗೆ ಮಾಡಿದರು. ಈ ಸಂದರ್ಭ ನೆರೆದಿದ್ದ ಸಾವಿರಾರು ಭಕ್ತರಿಗೆ ಅಲ್ಲಲ್ಲಿ ಪಾನಕ, ಮಜ್ಜಿಗೆ, ಪನಿವಾರ ಹಾಗೂ ಅನ್ನಸಂತರ್ಪಣೆ ನೆರವೇರಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net