ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸ್ವಯಂ ಸೇವಕರಂತೆ ಶ್ರಮಿಸಿ

SRP_07-02jpj
Published on

ಶ್ರೀರಂಗಪಟ್ಟಣ : ಜಿಲ್ಲೆಯಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಲು ಪ್ರತಿಯೊಬ್ಬ ನೌಕರರೂ ಸ್ವಯಂ ಸೇವಕರಂತೆ ಶ್ರಮಿಸಬೇಕು ಎಂದು ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.

ತಾಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರ ಸಮ್ಮುಖ ಹಮ್ಮಿಕೊಂಡಿದ್ದ ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು. ಡಿ. 21, 22 ಹಾಗೂ 23ರಂದು ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದದಲ್ಲಿ ಆಹಾರ ಸಮಿತಿ ಉಸ್ತುವಾರಿ ನನ್ನ ಜವಾಬ್ದಾರಿಯಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ನೀರು, ಆಹಾರ ಸೂಕ್ತವಾಗಿ ದೊರಕಬೇಕು. ಸ್ವಚ್ಛತೆ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರಿ ನೌಕರರು ಶ್ರಮಿಸಬೇಕು ಎಂದರು.

ಸ್ವಚ್ಛತಾ ಸೇವೆಗೆ ಬನ್ನಿ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 32 ಪಂಚಾಯಿತಿಗಳಿವೆ. ಇವುಗಳಲ್ಲಿ ತಲಾ 10 ಆಟೋಗಳನ್ನು ಸಮ್ಮೇಳನದ ಸ್ವಚ್ಛತಾ ಸೇವೆಗೆ ಕಳಿಸಿಕೊಡಬೇಕು. ವಾಹನ ಚಾಲಕ, ಬಿಲ್ ಕಲೆಕ್ಟರ್ ಹಾಗೂ ಗ್ರಾಪಂ ಪಿಡಿಒಗಳು ಪಾಳಿ ಪ್ರಕಾರ ಪ್ರತಿ ದಿನ ಬೆಳಗಿನಿಂದ ಸಂಜೆವರೆಗೂ 3 ದಿನವೂ ಸ್ವಯಂ ಸೇವಕರಂತೆ ಸೇವೆ ನೀಡಬೇಕು ಎಂದು ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪ್ಲಾಸ್ಟಿಕ್ ಬಳಕೆ ನಿಷೇಧ: ಸಾಹಿತ್ಯ ಸಮ್ಮೇಳನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸ್ವಚ್ಛತೆ ಸೇವೆ ಮಾಡಬೇಕು. ಪಟ್ಟಣ ಪುರಸಭೆ ಪೌರ ಕಾರ್ಮಿಕರನ್ನು ಸೂಕ್ತವಾಗಿ ಪೂರೈಸಬೇಕು. ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಸೂಕ್ತ ಟ್ಯಾಂಕರ್‌ಗಳನ್ನು ನೀಡಿ, ಶುದ್ಧ ಜಲ ಪೂರೈಸುವಂತೆ ನೋಡಿಕೊಳ್ಳಬೇಕು ಎಂದು ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.

ಸಮ್ಮೇಳನಕ್ಕೆ ತಾಲೂಕಿನ ಆಶಾ ಕಾರ್ಯಕರ್ತರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಎನ್‌ಆರ್‌ಎಲ್‌ಎಮ್ ಸದಸ್ಯರು ಕೇವಲ ಪ್ರತಿನಿಧಿಗಳಾಗಿ ಆಗಮಿಸದೇ ಸ್ವಯಂ ಸೇವಕರಾಗಿ ಶ್ರಮಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಾಗಲು, ಮತ್ತು ಆತಿಥ್ಯ ಸೇವೆ ಜವಾಬ್ದಾರಿ ನಿರ್ವಹಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಸಂಭ್ರಮಿಸಲು 3 ದಿನವೂ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಕ್ಷೇತ್ರಗಳ ವ್ಯಾಪ್ತಿಯ ಪ್ರತಿ ಮನೆಗಳ ಮೇಲೂ ನಾಡಧ್ವಜ ಹಾರಿಸಬೇಕು. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ರಥಕ್ಕೆ ಸ್ವಾಗತಿಸಿ: ಡಿ.12ರಂದು ಮೈಸೂರು ಜಿಲ್ಲೆಯಿಂದ ಕನ್ನಡ ಜಾಗೃತಿ ಪ್ರಚಾರ ರಥ ಆಗಮಿಸುತ್ತಿದೆ. ಕ್ಷೇತ್ರದ ಗಡಿ ನಗುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರಿಜಾ ನಾಲೆ ಗೇಟ್ ಬಳಿ ಅಂದು ತಾಲೂಕು ಆಡಳಿತದ ಎಲ್ಲ ಅಧಿಕಾರಿ, ಸಿಬ್ಬಂದಿ ಖುದ್ದು ಹಾಜರಿದ್ದು, ರಥವನ್ನು ಸ್ವಾಗತಿಸಿ ಎಂದು ರಮೇಶ ಬಂಡಿಸಿದ್ದೇಗೌಡ ಸೂಚಿಸಿದರು. ಡಿ.17ರಂದು ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಬೆಳಗ್ಗೆ 7ಕ್ಕೆ ಹಮ್ಮಿಕೊಂಡಿರುವ ಕನ್ನಡಕ್ಕಾಗಿ ಓಟ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಬಿಇಒ ಅವರಿಂದ ಮಾಹಿತಿ ಪಡೆದು ಹೆಸರು ನೋಂದಾಯಿಸಿಕೊಳ್ಳಿ ಎಂದು ಅವರು ಮಾಹಿತಿ ನೀಡಿದರು.

ಉತ್ತಮ ಸ್ಪಂದನೆ ವ್ಯಕ್ತವಾಗಲಿ:

ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಬೇಕು. ತಮಗೆ ಒಪ್ಪಿಸಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಸಮ್ಮೇಳನ ಯಶಸ್ಸಿಗೆ ತಾಲೂಕಿನಿಂದ ಉತ್ತಮ ಸ್ಪಂದನೆ ವ್ಯಕ್ತವಾಗಬೇಕು ಎಂದರು.

ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ತಾಪಂ ಇಒ ವೇಣು, ಬಿಇಒ ಆರ್.ಪಿ.ಮಹೇಶ್, ಸೆಸ್ಕ್ ಎಇಇ ಮಂಜುನಾಥ್ ಪ್ರಸಾದ್, ಎಡಿಎಲ್‌ಆರ್ ಮೇಘನಾ, ಸಮಾಜ ಕಲ್ಯಾಣಾಧಿಕಾರಿ ಮೇಘ, ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್ ಪಂಡಿತ್, ಪಿಡಿಒಗಳ ಸಂಘದ ಅಧ್ಯಕ್ಷ ಪ್ರಶಾಂತ್ ಬಾಬು ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net