

ಶ್ರೀರಂಗಪಟ್ಟಣ: ಪಾರಂಪರಿಕ ದಸರಾ ಪ್ರಯುಕ್ತ ಶ್ರೀರಂಗಪಟ್ಟಣದಲ್ಲಿ ಮೊದಲನೇ ದಿನದ ಫಿಟ್ ಇಂಡಿಯಾ ಮ್ಯಾರಥಾನ್ ಸ್ಪರ್ಧೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಶಿವಮೂರ್ತಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಪಟ್ಟಣದ ತಾಲೂಕು ಕ್ರೀಡಾಂಗಣದ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ 7ಕ್ಕೆ ನೂರಾರು ಕ್ರೀಡಾಪಟುಗಳು ಜಮಾವಣೆಗೊಂಡಿದ್ದು, ಸ್ಪರ್ಧೆಯು ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಆರ್.ರಾಘವೇಂದ್ರ ಅವರ ನಿರ್ದೇಶನದಂತೆ ಗಂಜಾಂನ ಮುಖ್ಯರಸ್ತೆ ಮಾರ್ಗವಾಗಿ 5 ಕಿ.ಮೀ. ದೂರದ ಕರಿಫಟ್ಟದ ತಾಳುಬೆಟ್ಟದ ಪಾದದವರೆಗೆ ಸಾಗಿತು.
29 ವರ್ಷ ಒಳಗಿನ ಯುವಜನರು ಹಾಗೂ 30 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಸೇರಿದಂತೆ ಸುಮಾರು 300 ಕ್ರೀಡಾಪಟುಗಳು ಪ್ರತ್ಯೇಕವಾಗಿ ಓಟಗಳಲ್ಲಿ ಭಾಗವಹಿಸಿ ಉತ್ಸಾಹ ಮೆರೆದರು. ಈ ವೇಳೆ ಪಟ್ಟಣದ ಜನರು ಚಪ್ಪಾಳೆ ತಟ್ಟುವ ಮೂಲಕ ದಾರಿಯುದ್ದಕ್ಕೂ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡಿದರು. ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎಲ್ಲ ಕ್ರೀಡಾಪಟುಗಳಿಗೂ ಜಿಲ್ಲಾಡಳಿತ ವತಿಯಿಂದ ಉಚಿತವಾಗಿ ಟೀ ಶರ್ಟ್ ವಿತರಿಸಿ ಹುರಿದುಂಬಿಸಲಾಗಿತ್ತು. ಒಟ್ಟು ಸ್ಪರ್ಧಿಗಳಲ್ಲಿ 30 ವರ್ಷದೊಳಗಿನ ಮತ್ತು 30 ವರ್ಷ ಮೇಲಿನ ವಿಭಾಗದವರಿಗೆ ನಗದು ಬಹುಮಾನವಾಗಿ ಪ್ರಥಮ ಸ್ಥಾನ ಗಳಿಸಿದವರಿಗೆ 1500, ದ್ವಿತೀಯ 1000, ಹಾಗೂ ತೃತೀಯ ಸ್ಥಾನಕ್ಕೆ ರೂ.500 ಗೌರವ ಧನ ಪ್ರಶಸ್ತಿಯೊಂದಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.30 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಎಸ್.ಜಿ.ವಿಜಯ (ಪ್ರ) ಎನ್.ಆರ್.ಶೋಭಾ (ದ್ವಿ) ಮತ್ತು ಉಮಾ (ತೃ) ಸ್ಥಾನ ಗಳಿಸಿದರು.
ಪುರುಷರ ವಿಭಾಗದಲ್ಲಿ ಉದಯ್ ಬಿಲ್ಲವ (ಪ್ರ), ಬಿ.ಮಧು ಚಂದ್ರನ್ (ದ್ವಿ) ಮತ್ತು ಡಿ.ರಾಘವ (ತೃ) ಸ್ಥಾನ ಗಳಿಸಿದರು. 30 ವರ್ಷದೊಳಗಿನ ಮಹಿಳೆಯರಲ್ಲಿ ಎಸ್.ಜಯಶ್ರೀ (ಪ್ರ), ರಾಧಿಕಾ (ದ್ವಿ) ಮತ್ತು ದಿವ್ಯಶ್ರೀ (ತೃ). ಪುರುಷರ ವಿಭಾಗದಲ್ಲಿ ಮಣಿಕಂಠ (ಪ್ರ), ಎಚ್.ಡಿ. ದೊರೆ ದ್ವಿ) ಮತ್ತು ಶಿವು (ತೃ) ಸ್ಥಾನ ಗಳಿಸಿದರು. ಪಟ್ಟಣದ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಬಹುಮಾನ ವಿತರಿಸಲಾಯಿತು.