ಸುಪ್ರಭಾತ ಅಭಿಯಾನ ಹಿಂಪಡೆದ ಶ್ರೀರಾಮಸೇನೆ; ಅದಕ್ಕೆ ಕಾರಣವಿದು...

1275387
Published on

ಧಾರವಾಡ: ಮಸೀದಿಗಳಲ್ಲಿ ಅನಧಿಕೃತವಾಗಿ ಧ್ವನಿವರ್ಧಕ ಬಳಸಿ ಜೋರಾಗಿ ಆಜಾನ್ ಕೂಗುವುದರ ವಿರುದ್ಧ ಸವಾಲೆಸೆದು ಮಂದಿರಗಳಲ್ಲಿ ಸುಪ್ರಭಾತ ಅಭಿಯಾನ ಆರಂಭಿಸಿದ್ದ ಶ್ರೀರಾಮಸೇನೆ ಸದ್ಯ ಆ ಅಭಿಯಾನವನ್ನು ಸ್ಥಗಿತಗೊಳಿಸಿ, ಅದರಿಂದ ಹಿಂದಕ್ಕೆ ಸರಿದಿದೆ.

ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಈ ಬಗ್ಗೆ ಧಾರವಾಡದಲ್ಲಿ ಹೇಳಿಕೆ ನೀಡಿದ್ದು, ಸುಪ್ರಭಾತ ಅಭಿಯಾನ ಹಿಂದಕ್ಕೆ ಪಡೆದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಅನಧಿಕೃತ ಮೈಕ್ ತೆರವು ಸಂಬಂಧ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರದ ಹಿನ್ನೆಲೆಯಲ್ಲಿ ಸುಪ್ರಭಾತ ಅಭಿಯಾನದಿಂದ ಹಿಂದಕ್ಕೆ ಸರಿದಿರುವುದಾಗಿ ಅವರು ತಿಳಿಸಿದ್ದಾರೆ.

ಅನಧಿಕೃತ ಮೈಕ್ ತೆರವಿಗೆ ಸರ್ಕಾರ ಗಡುವು ನೀಡಿ ಅಧಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ. ಮೈಕ್ ಹಾಕುವವರಿಗೆಲ್ಲ ಗಡುವು ವಿಧಿಸಿದ್ದನ್ನು ಹಿಂದೂಪರ ಸಂಘಟನೆಯವರು ಸ್ವಾಗತಿಸುತ್ತೇವೆ. ಮೈಕ್ ಬಳಸಲು ಕೂಡಲೇ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ, ತಡವಾದರೂ ಇದು ಯೋಗ್ಯ ನಿರ್ಣಯ. ಸದ್ಯ 15 ದಿನ ಗಡುವು ಕೊಟ್ಟಿದ್ದಾರೆ. ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ, ಸುಪ್ರೀಂ ಕೋರ್ಟ್ ಆದೇಶದ ಉಲ್ಲೇಖ ಮಾಡಲಾಗಿದೆ. ಡಿವೈಎಸ್​​ಪಿ, ಎಸಿಪಿ, ಪೊಲೀಸ್ ಕಮಿಷನರ್ ಮಟ್ಟದಲ್ಲಿ ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ. ಇದಕ್ಕಾಗಿ ಸಿಎಂಗೆ ನಾವು ಅಭಿನಂದನೆ ಹೇಳುತ್ತೇವೆ. ಮಾತ್ರವಲ್ಲದೆ ನಾವು ನಮ್ಮ ಹೋರಾಟ ವಾಪಸ್ ಪಡೆಯುತ್ತೇವೆ. ನಾಳೆಯಿಂದ ಸುಪ್ರಭಾತ ಅಭಿಯಾನ ನಿಲ್ಲಿಸುತ್ತೇವೆ. ಆದರೆ 15 ದಿನಗಳ ನಂತರ ಈ ಕ್ರಮ ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಮುತಾಲಿಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net