ಎಲ್ಲೆಡೆ ಶ್ರೀ ರಾಮನವಮಿ ಸಂಭ್ರಮ ; ಹನುಮಂತನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

10 Nela Ph 02 Utsava
Published on

ನೆಲಮಂಗಲ: ತಾಲೂಕಿನಾದ್ಯಂತ ಭಾನುವಾರ ಶ್ರೀ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ರಾಮ ಹಾಗೂ ಶ್ರೀ ರಾಮನ ಬಂಟ ಹನುಮಂತನ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ತಾಲೂಕಿನಾದ್ಯಂತ ರಾಮ, ಆಂಜನೇಯನ ದೇಗುಲಗಳಿಗೆ ಬೆಳಗ್ಗೆಯಿಂದಲೇ ಬಂದ ಸಹಸ್ರಾರು ಭಕ್ತರು ಶ್ರೀ ರಾಮ ಮತ್ತು ಆಂಜನೇಯನ ಜಪತಪಗಳಲ್ಲಿ ತೊಡಗಿಕೊಂಡಿದ್ದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಪಾನಕ. ಮಜ್ಜಿಗೆ, ಕೊಸಂಬರಿ ವಿತರಣೆ: ಶ್ರೀ ರಾಮ ಹಾಗೂ ಹನುಮನನ್ನು ಪ್ರಾರ್ಥಿಸಿದ ಭಕ್ತರು, ಇಷ್ಟಾರ್ಥ ಸಿದ್ಧಿಗೆ ಹರಕೆ ಹೊತ್ತರು. ಕೆಲ ಭಕ್ತರು ಹರಕೆ ತೀರಿಸಿದರು. ಬೇಸಿಗೆಯ ಬಿರುಬಿಸಿಲ ನಡುವೆಯೂ ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ದೇವಾಲಯ ಸಮಿತಿ ಮತ್ತು ಭಕ್ತವೃಂದದವರು ಅರವಂಟಿಗೆ ಸೇವೆ ಏರ್ಪಡಿಸಿ ಪಾನಕ, ಮಜ್ಜಿಗೆ ಕೋಸಂಬರಿ ವಿತರಿಸಿದರು. ನಗರದ ಉತ್ತರಘಟ್ಟ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದವಾಗಿ ರಾಮರಸ ಪ್ರಸಾದವನ್ನು ವಿತರಿಸಲಾಯಿತು.

ವಿವಿಧೆಡೆ ವಿಶೇಷ ಪೂಜೆ: ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯವಾದ ಬೈರಶೆಟ್ಟಿಹಳ್ಳಿ ಆಂಜನೇಯ ಸ್ವಾಮಿಯ ದೇವಾಲಯ, ಅರಿಶಿಣಕುಂಟೆ, ನಗರದ ಉತ್ತರಘಟ್ಟ ಆಂಜನೇಯ ಸ್ವಾಮಿ ದೇವಾಲಯ, ಪರಮಣ್ಣ ಬಡಾವಣೆಯ ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಪ್ರವಾಸಿ ಮಂದಿರ ಬಸ್ ನಿಲ್ದಾಣದ ಶ್ರೀ ಭಕ್ತಾಂಜನೇಯ, ಪಟೇಲ್ ಚೆನ್ನಪ್ಪ ಬಡಾವಣೆಯ ಶ್ರೀ ರಾಮಂಜನೇಯ ಸ್ವಾಮಿ ದೇವಾಲಯ ಹಾಗೂ ಪೇಟೆಬೀದಿಯ ರಾಮ ಮಂದಿರ, ರಾ. ಹೆದ್ದಾರಿ ಬಳಿಯ ಪ್ರಸನ್ನ ಆಂಜನೇಯ ಸ್ವಾಮಿ ಟ್ರಸ್ಟ್ ಸ್ಥಾಪಿಸಿರುವ ಬೃಹತ್ ಹನುಮಂತನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಮಾಜಿ ಶಾಸಕ ಎಂ.ವಿ. ನಾಗರಾಜು, ಟ್ರಸ್ಟ್ ಪದಾಧಿಕಾರಿ ಬೈರೇಗೌಡ, ಕೇಶವಮೂರ್ತಿ, ಎಚ್.ಜಿ. ರಾಜು, ನೆ.ಯೋ. ಪ್ರಾಧಿಕಾರದ ಅಧ್ಯಕ್ಷ ಎಸ್. ಮಲ್ಲಯ್ಯ, ಬಿಎಂಟಿಸಿ ನಿರ್ದೇಶಕ ಕೆ.ಪಿ. ಬೃಂಗೇಶ್ ಮತ್ತಿತರರು ಇದ್ದರು.

ಅದ್ದೂರಿ ಮೆರವಣಿಗೆ: ನಗರದ ಚನ್ನಪ್ಪ ಬಡಾವಣೆಯಲ್ಲಿ ನವಮಿ ಪ್ರಯುಕ್ತ ಸೀತಾ ಶ್ರೀ ರಾಮಾಂಜನೇಯ ಸ್ವಾಮಿ ದೇವರ ಉತ್ಸವಮೂರ್ತಿಗಳನ್ನು ಬೆಳ್ಳಿ ರಥದಲ್ಲಿರಿಸಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಮನೆ ಎದುರು ಮೆರವಣಿಗೆ ಸಾಗಿಬಂದಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪಾನಕ, ಮಜ್ಜಿಗೆ, ಕೋಸಂಬರಿ ನೈವೇದ್ಯ ಮಾಡಿ, ಮೆರವಣಿಗೆಯಲ್ಲಿದ್ದವರಿಗೆ ವಿತರಿಸಿದರು. ನಗರಸಭೆ ಸದಸ್ಯ ಎನ್. ಗಣೇಶ್, ಮುಖಂಡ ಲೋಕೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net