

ಹುಬ್ಬಳ್ಳಿ : ಲವ್ ಜಿಹಾದ್ನಿಂದ ಹಿಂದು ಯುವತಿಯರ ರಕ್ಷಣೆಗಾಗಿ ಶ್ರೀರಾಮ ಸೇನಾದಿಂದ ಕಳೆದ ಮೇ 29ರಂದು ಪ್ರಾರಂಭಿಸಿದ್ದ ಸಹಾಯವಾಣಿಗೆ ಭಾರಿ ಸ್ಪಂದನೆ ವ್ಯಕ್ತವಾಗಿರುವ ಮಧ್ಯೆಯೇ ಬೆದರಿಕೆ ಕರೆಗಳೂ ಬರುತ್ತಿವೆ.
ಸಹಾಯವಾಣಿ ಪ್ರಾರಂಭಗೊಂಡ ಎರಡ್ಮೂರು ದಿನಕ್ಕೆ ರಾಜ್ಯಾದ್ಯಂತ ತಾಯಂದಿರು, ಸಂತ್ರಸ್ಥೆಯರು, ಪ್ರೋತ್ಸಾಹ ನೀಡುವವರು ಕರೆ ಮಾಡಿದ್ದಾರೆ. ಅದೇ ರೀತಿ, ಸಹಾಯವಾಣಿ ಸ್ಥಗಿತಗೊಳಿಸುವಂತೆ ಬೆದರಿಕೆ ಕರೆಗಳೂ ಬಂದಿವೆ. ಈ ಕರೆಗಳ ಸಂಖ್ಯೆ ದಿನದಿಂದ ದಿನಕ್ಕೆ ಇನ್ನೂ ಹೆಚ್ಚುತ್ತಲೇ ಇದೆ.
ಮೂಲಗಳ ಪ್ರಕಾರ, ಮೇ 3ರಂದು ಬೆಳಗಿನಜಾವ ಮಂಗಳೂರಿನಿಂದ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ, ಶ್ರೀರಾಮ ಸೇನೆಗೆ ಮನಬಂದಂತೆ ಬೈದಿದ್ದಾನೆ. ಬೆದರಿಕೆಯನ್ನೂ ಹಾಕಿದ್ದಾನೆ.
ಸಹಾಯವಾಣಿ (9090443444) ಪ್ರಾರಂಭಗೊಂಡ ಕೆಲವೇ ಸಮಯದಲ್ಲಿ ರಾಜ್ಯಾದ್ಯಂತ ಆಪ್ತವಾಗಿ ಬಿಟ್ಟಿದೆ. ಸಹಾಯವಾಣಿ ಪ್ರಾರಂಭಗೊಂಡ ಮೊದಲ ದಿನವೇ 148 ಕರೆಗಳು ರಾಜ್ಯಾದ್ಯಂತ ಬಂದಿವೆ. ಇವುಗಳಲ್ಲಿ ಮೊದಲ ದಿನ ತಾಯಂದಿರಿಂದ 37, ಲವ್ಜಿಹಾದ್ ಸಂತ್ರಸ್ತರಿಂದ 52, ಪ್ರೋತ್ಸಾಹ ನೀಡುವವರಿಂದ 42 ಕರೆಗಳು ಬಂದಿದ್ದು, ಬೆದರಿಕೆ ಒಡ್ಡುವ 17 ಕರೆಗಳೂ ಬಂದಿವೆ.
ತಡರಾತ್ರಿ 1, 2 ಗಂಟೆಗೂ ಸಹಾಯವಾಣಿಗೆ ಕರೆ ಮಾಡಿ, ಅಹವಾಲು ಹೇಳಿಕೊಳ್ಳುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಮಂಗಳೂರು ಹಾಗೂ ಮೈಸೂರು ಭಾಗಗಳಿಂದ ಐದಾರು ಬೆದರಿಕೆ ಕರೆಗಳೂ ಬಂದಿವೆಯಂತೆ.
ಬೆದರಿಕೆ ಕರೆಗಳ ವಿರುದ್ಧ ಶ್ರೀರಾಮ ಸೇನೆ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ. ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆ ಹೇಳಿಕೊಂಡವರಿಗೆ ಸ್ಪಂದನೆ ನೀಡುವ ಕಾರ್ಯವನ್ನು ಶ್ರೀರಾಮ ಸೇನೆ ಪ್ರಾರಂಭಿಸಿದೆ.