

ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 200 ಕೋಟಿ ರೂ. ವ್ಯವಹಾರ ನಡೆಸಿ 51.96 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.13 ಲಾಭಾಂಶ ನೀಡಲಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಎಸ್.ರಾಜು ಪೂಜಾರಿ ಹೇಳಿದರು.
ಬೈಂದೂರು ಪ್ರಧಾನ ಕಚೇರಿಯಲ್ಲಿ ಭಾನುವಾರ ಸೊಸೈಟಿ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿದರು. ನಾಲ್ಕು ಶಾಖೆ ಹೊಂದಿದ ನಮ್ಮ ಸಂಘ 15 ವರ್ಷ ಪೂರೈಸಿದೆ. ಸಹಕಾರಿ ಸಂಸ್ಥೆ ಮುನ್ನೆಡೆಸುವಾಗ ಸವಾಲುಗಳು ಸಹಜ. ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ಚಿಂತನೆ ಮೂಲಕ ಅಭಿವೃದ್ದಿ ಸಾಧ್ಯ ಎಂದರು.
ಗೋಳಿಹೊಳೆ ಶಾಖಾ ಪ್ರಬಂಧಕ ರಾಘವೇಂದ್ರ, ಹಿಂದಿನ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ, ವಾರ್ಷಿಕ ಲೆಕ್ಕಪತ್ರ ನಿವ್ವಳ ಲಾಭ ವಿಲೇವಾರಿ, ವಿತರಣೆ, ಮುಂದಿನ ಸಾಲಿನ ಅಂದಾಜು ಬಜೆಟ್ ಅನ್ನು ಮಂಡಿಸಿ, ಅನುಮೋದನೆ ಪಡೆದರು. ನಿರ್ದೇಶಕರಾದ ಸೀತಾರಾಮ ಮಡಿವಾಳ, ಅಣ್ಣಪ್ಪ ಪೂಜಾರಿ, ರಾಮಕೃಷ್ಣ, ಮಂಜು ಪೂಜಾರಿ, ಮಂಜುನಾಥ ಪೂಜಾರಿ, ಪ್ರಶಾಂತ ಪೂಜಾರಿ ಮತ್ತಿತರರು ಇದ್ದರು.
ಸಂಘ ಉಪಾಧ್ಯಕ್ಷ ಎಂ.ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ.ಕಿಟ್ಟಣ್ಣ ರೈ ನಿರೂಪಿಸಿದರು. ಪ್ರಧಾನ ಕಚೇರಿ ವ್ಯವಸ್ಥಾಪಕ ಶ್ರೀನಿವಾಸ ವಂದಿಸಿದರು.