

ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ
ಕರೊನಾ ಭೀತಿಯಿಂದ ಶ್ರೀನಿವಾಸಪುರದಲ್ಲಿ ಮಾವಿನ ಮಾರುಕಟ್ಟೆ ಪ್ರಾರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರೈತರು ಹಾಗೂ ವ್ಯಾಪಾರಸ್ಥರ ಹಿತದೃಷ್ಟಿಯಿಂದ ತಾಲೂಕು ಆಡಳಿತವನ್ನು ಬಿಗಿಗೊಳಿಸಿ ಮಾರುಕಟ್ಟೆ ಪ್ರಾರಂಭಿಸಲಾಗಿದೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ಗೌನಿಪಲ್ಲಿಯ ಜಗನ್ ಮಾಲೀಕತ್ವದ ಎಚ್ಪಿ ಗ್ಯಾಸ್ ನೂತನ ಶಾಖೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತರ ಮತ್ತು ವರ್ತಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ಮಂಡಿ ಪ್ರಾರಂಭಿಸಲಾಗಿದೆ. ಅದರಂತೆ ವಹಿವಾಟು ನಡೆಯುತ್ತಿದೆ. ಹೀಗೆ ಮಾವಿನ ಸುಗ್ಗಿ ಮುಗಿಯುವವರೆಗೆ ನಿಬಂಧನೆ ಮುಂದುವರಿಸಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಸಚಿವ ಎಚ್.ನಾಗೇಶ್ ಮಾತನಾಡಿ, ಗ್ರಾಮೀಣ ಭಾಗಕ್ಕೆ ಎಚ್ಪಿ ಗ್ಯಾಸ್ ಅವಶ್ಯಕತೆ ಇತ್ತು. ಶ್ರೀನಿವಾಸಪುರದಿಂದ ಇಲ್ಲಿಗೆ 20 ಕಿಮೀ ದೂರವಿರುವುದರಿಂದ ಸಾರಿಗೆ ಶುಲ್ಕ ಹೆಚ್ಚಾಗುತ್ತಿತ್ತು. ಸ್ಥಳೀಯವಾಗಿ ಈ ಶಾಖೆ ಪ್ರಾರಂಭವಾಗಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.
ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ನಿರ್ಗಮನದ ನಂತರ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಗಮಿಸಿದರು. ಮಾಜಿ ಶಾಸಕರಾದ ವೈ.ಸಂಪಂಗಿ, ಡಾ.ಸುಧಕಾರರೆಡ್ಡಿ, ಜಿಪಂ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ಸಿ.ಎಂ.ಮುನಿಯಪ್ಪ, ರಾಜಪ್ಪ, ವಿಜಯಕುಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಚಿಮುಲ್ ನಿರ್ದೇಶಕ ಹನುಮೇಶ್, ವಕೀಲ ಶ್ರೀಕೃಷ್ಣ, ಗೊಲ್ಲಹಳ್ಳಿ ಶಿವಪ್ರಸಾದ್ ಇತರರು ಇದ್ದರು.
ಹಂತಹಂತವಾಗಿ ನೀರು: ಕೆಸಿ ವ್ಯಾಲಿ ನೀರು ಆಲವಾಟ ಕೆರೆ ಒಂದರೆಡು ದಿನಗಳಲ್ಲಿ ತುಂಬಿ ಆಲವಾಟ ಚಿಕ್ಕಕೆರೆಗೆ ಹರಿಯಲಿದೆ. ವಾರದೊಳಗೆ ಚಿಕ್ಕಕೆರೆ ತುಂಬಿ ಜೆ.ತಿಮ್ಮಸಂದ್ರ ಕೆರೆಗೆ ಹೋಗುತ್ತಿದೆ. ಮುದವಾಡಿ ಕೆರೆಗೆ ನೀರು ಬರುತ್ತಿದೆ. ಹೀಗೆ ಹಂತ-ಹಂತವಾಗಿ ತಾಲೂಕಿನ ಎಲ್ಲ ಕೆರೆಗೆ ನೀರು ಹರಿಯಲಿದೆ. ಅಷ್ಟರೊಳಗೆ ಇಲಾಖೆಯವರು ರಾಜುಕಾಲವೆ ನಿರ್ಮಿಸಲಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ಕುಮಾರ್ ಹೇಳಿದರು.