

ಮೈಸೂರು: ವಿಶ್ವನಾಥ್ ನನ್ನ ಮಾತು ಕೇಳಿದ್ದರೆ ಈಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುತ್ತಿದ್ದರು. ಆದರೆ, ಈ ನಡುವೆ ಕಷ್ಟಪಟ್ಟು ಎಂಎಲ್‌ಸಿಯಾಗಿ ನಾಮನಿರ್ದೇಶನಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಂತ್ರಿಯಾಗುವುದು ಸ್ವಲ್ಪ ಕಷ್ಟ ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಮನೆಗೆ ಗುರುವಾರ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸಪ್ರಸಾದ್, ‘‘ಸದ್ಯಕ್ಕೆ ವಿಶ್ವನಾಥ್ ಅಟ್ಟಕ್ಕೆ ಏರಿದ್ದಾರೆ. ಸ್ವರ್ಗಕ್ಕೆ ಏರೋದು ಬಾಕಿ ಇದೆ. ಅವರು ಛಲ ಬಿಡದ ತ್ರಿವಿಕ್ರಮ. ಎಂಎಲ್ಸಿ ಆಗಿದ್ದರೂ ಸರ್ಕಾರದಲ್ಲಿ ಉಳಿದಿರುವುದು ಕೆಲವೇ ಕೆಲವು ಸಚಿವ ಸ್ಥಾನಗಳು ಮಾತ್ರ. ಈಗಾಗಲೇ ಸಾಮಾಜಿಕ ನ್ಯಾಯದ ಅನುಸಾರ ಕೆ.ಎಸ್. ಈಶ್ವರಪ್ಪ, ಭೈರತಿ ಬಸವರಾಜ್ ಮಂತ್ರಿಯಾಗಿದ್ದಾರೆ. ಮುಂದೆ ಎಂಟಿಬಿ ನಾಗರಾಜ್, ಆರ್. ಶಂಕರ್ ಸಚಿವರಾಗಬಹುದು. ಹೀಗಿರುವಾಗ ವಿಶ್ವನಾಥ್‌ಗೆ ಸಚಿವ ಸ್ಥಾನ ಹೇಗೆ ಸಿಗುತ್ತೆ’’ ಎಂದು ಪ್ರಶ್ನಿಸಿದರು. ಇದನ್ನೂ ಓದಿ ಒಂದು ರೂಪಾಯಿ ಅವ್ಯವಹಾರ ಸಾಬೀತು ಪಡಿಸಿದ್ರೆ ರಾಜೀನಾಮೆ; ಶ್ರೀರಾಮುಲು
‘‘ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಡಿ. ನೇರವಾಗಿ ಎಂಎಲ್ಸಿ ಸ್ಥಾನ ಪಡೆದು ಮಂತ್ರಿಯಾಗಿಬಿಡಿ ಅಂತ ನಾನು ಅವರಿಗೆ ಮೊದಲೇ ಹೇಳಿದ್ದೆ. ಆದರೆ ನನ್ನ ಮಾತನ್ನು ಕೇಳಲಿಲ್ಲ. ನನ್ನ ಮಾತು ಕೇಳಿದ್ದರೆ ಈಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುತ್ತಿದ್ದರು. ಈ ನಡುವೆ ಕಷ್ಟಪಟ್ಟು ಎಂಎಲ್‌ಸಿಗೆ ನಾಮನಿರ್ದೇಶನಗೊಂಡಿದ್ದಾರೆ.
ವಿಶ್ವನಾಥ್ ಹಾಗೂ ನಾನು ಸಮಾನ ವಯಸ್ಕರು. ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣ ಮಾಡಿಕೊಂಡು ಬಂದವರು. ಅವರು ಹೋರಾಟದ ಮೂಲಕ ಏಳುಬೀಳುಗಳನ್ನು ಕಂಡಿದ್ದಾರೆ. ಈಗ ಅವರಿಗೆ ಸಿಕ್ಕಿರುವ ಸ್ಥಾನದ ಬಗ್ಗೆ ಖುಷಿಯಾಗಿದ್ದಾರೆ’’ ಎಂದರು.
‘‘ಕರೊನಾ ಹೆಸರಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೆಕ್ಕ ಕೊಡಿ ಎಂದು ಕೇಳುತ್ತಿರುವುದು ಸರಿಯಲ್ಲ. ಇದನ್ನು ಕೇಳುವುದು ತಪ್ಪಲ್ಲ. ಈ ಸಮಯದಲ್ಲಿ ಲೆಕ್ಕ ಇಡಲು ಸಾಧ್ಯವೇ? ಲೆಕ್ಕ ಕೇಳುವುದನ್ನು ಬಿಟ್ಟು ಸರ್ಕಾರದೊಂದಿಗೆ ಸಹಕಾರ ನೀಡಬೇಕು. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೆ ಅಲ್ಲಿ ಲೆಕ್ಕ ಸಿಗುತ್ತದೆ. ಲೆಕ್ಕ ಕೊಡದೆ ಯಾರೂ ಎಲ್ಲಿಯೂ ಓಡಿ ಹೋಗುವುದಿಲ್ಲ’’ ಎಂದರು.