ಮೌಲ್ಯಗಳೊಡನೆ ಬದ್ಧತೆಯಿಂದ ಬದುಕಿದ ಶ್ರೀನಿವಾಸಪ್ರಸಾದ್: ಸಾಹಿತಿ ಬನ್ನೂರು ಕೆ.ರಾಜು ಬಣ್ಣನೆ

20
Published on

ಮೈಸೂರು: ಬಾಬಾಸಾಹೇಬರು ಹೇಳಿದಂತೆ ವಿ.ಶ್ರೀನಿವಾಸಪ್ರಸಾದ್ ಅವರು ಸ್ವಾಭಿಮಾನಿಯಾಗಿ ಮೌಲ್ಯಗಳೊಡನೆ ಬದ್ಧತೆಯಿಂದ ಬದುಕಿದ ನಾಡಿನ ಬಹು ಅಪರೂಪದ ರಾಜಕೀಯ ಮುತ್ಸದ್ಧಿಯಾಗಿದ್ದರು ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.
ವಿಶ್ವ ಮಾನವ ಮಹಾನಾಯಕ ಪ್ರತಿಷ್ಠಾನದಿಂದ ನಗರದ ಅಶೋಕಪುರಂನ ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಶನಿವಾರ ಆಯೋಜಿಸಿದ್ದ ವಿ.ಶ್ರೀನಿವಾಸಪ್ರಸಾದ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೋಷಿತ ಮತ್ತು ದಲಿತರೆದೆಯ ಉಸಿರಾಗಿದ್ದ ಶ್ರೀನಿವಾಸಪ್ರಸಾದ್ ಈಗ ಭೌತಿಕವಾಗಿ ನಮ್ಮೊಂದಿಗಿಲ್ಲವಾದರೂ ಅವರ ಸ್ವಾಭಿಮಾನ, ದೂರ ದೃಷ್ಟಿ, ಜೀವಪರ ಚಿಂತನೆ, ಮನುಷ್ಯ ಪ್ರೇಮ, ಸಮಾನತೆಯ ಸಂಕಲ್ಪ, ಎಲ್ಲಕ್ಕಿಂತ ಹೆಚ್ಚಾಗಿ ದಲಿತ ಧ್ವನಿ ಎಲ್ಲರೆದೆಯಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದರು.
ನಮ್ಮ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಐದು ದಶಕಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಒಂದು ಕಪ್ಪು ಚುಕ್ಕಿಯೂ ಇಲ್ಲದಂತೆ ಪರಿಶುದ್ಧ ವ್ಯಕ್ತಿತ್ವದಿಂದ ರಾಷ್ಟ್ರದ ಗಮನ ಸೆಳೆದಿದ್ದ ಪ್ರಸಾದ್ ಅವರು, ತಮ್ಮ ರಾಜಕೀಯ ಜೀವನದ ಸುವರ್ಣ ಮಹೋತ್ಸವವನ್ನೂ ಆಚರಿಸಿಕೊಂಡಿದ್ದರು ಎಂದು ಹೇಳಿದರು.
ಸದಾ ಶೋಷಿತರ ಬಾಳಿಗೆ ಬೆಳಕಾಗ ಬೇಕು ಎನ್ನುವ ತುಡಿತ, ಜನರ ನೋವಿಗೆ ಮಿಡಿಯುತ್ತಿದ್ದರು. ಶೋಷಿತರ ಧ್ವನಿಯಾಗಿದ್ದ ಅವರು ಅಪ್ಪಟ ಅಂಬೇಡ್ಕರ್‌ವಾದಿಯಾಗಿಯಾಗಿದ್ದರು. ಬಾಬಾಸಾಹೇಬ ಅವರನ್ನು ಅಷ್ಟರಮಟ್ಟಿಗೆ ತಮ್ಮ ಎದೆಯೊಳಕ್ಕೆ ಇಳಿಸಿಕೊಂಡುಬಿಟ್ಟಿದ್ದರು ಎಂದರು.
ಶೋಷಿತರ ಬದುಕನ್ನು ಪಾವನಗೊಳಿಸಿದ ಪುಣ್ಯಾತ್ಮ ಬಾಬಾ ಸಾಹೇಬರ ಕಷ್ಟಕರ ಬದುಕೇ ನಮಗಿಂದು ಸುಖಕರವಾಗಿದೆ ಎಂದು ತಾವು ಬದುಕಿರುವ ತನಕವೂ ಪ್ರಸಾದ್ ಹೇಳುತ್ತಿದ್ದರು. ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಆರಾಧಿಸುವುದಕ್ಕಿಂತ ಹೆಚ್ಚಾಗಿ ಅವರ ತತ್ವಾದರ್ಶಗಳನ್ನು ಅನುಸರಿಸಬೇಕು ಎನ್ನುವ ಸಂದೇಶ ನೀಡುತ್ತಿದ್ದರು ಎಂದು ಹೇಳಿದರು.
ತಮ್ಮ ಜನೋಪಯೋಗಿ ಗುಣದಿಂದ ದಲಿತರು ಮಾತ್ರವಲ್ಲದೆ ದಲಿತೇತರರಾದ ಪ್ರತಿಯೊಂದು ವರ್ಗವನ್ನೂ ಪ್ರೀತಿಯಿಂದ ಗೆದ್ದಿದ್ದ ಪ್ರಸಾದ್ ವ್ಯಕ್ತಿತ್ವ ರಾಜಕಾರಣಿಗಳಲ್ಲೇ ವಿಶಿಷ್ಟವಾದದ್ದು. ಎಂತಹ ಪರಿಸ್ಥಿತಿಯಲ್ಲೂ ಸ್ವಾಭಿಮಾನವನ್ನು ಬಿಟ್ಟವರಲ್ಲ. 2013 -14ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಅವರನ್ನು ಸಕಾರಣವಿಲ್ಲದೇ ಸಚಿವ ಸ್ಥಾನದಿಂದ ತೆಗೆದು ಹಾಕಿದಾಗ ಅವರು ಒಂದು ಕ್ಷಣವೂ ಅಲ್ಲಿರದೆ ಹೊರಬಂದು ತಮ್ಮ ಸ್ವಾಭಿಮಾನ ಪ್ರದರ್ಶಿಸಿದರು. ಅಲ್ಲದೇ ಬಿಜೆಪಿ ಸೇರಿಕೊಂಡು ಅಲ್ಲೂ ಗೆಲುವು ಕಂಡು ತಮ್ಮ ಅಸ್ತಿತ್ವ ಉಳಿಸಿಕೊಂಡರು ಎಂದು ತಿಳಿಸಿದರು.
ತನ್ನ ಜನರೇ ತನ್ನ ಅಧಿಕಾರ. ತನ್ನ ಜನರೇ ತನ್ನ ಸರ್ವಸ್ವವೆಂದು ಶೋಷಿತರ ಸಂರಕ್ಷಣೆಗಾಗಿ ಬದುಕಿದವರು. ಈಗ ಅಂತಹ ಧೀಮಂತ ದಲಿತ ನಾಯಕ ಅಮರರಾಗಿದ್ದಾರೆ. ಇದರಿಂದ ನಾಡಿಗೆ ಅಪಾರ ನಷ್ಟವಾಗಿದ್ದು ಅದರಲ್ಲೂ ಮೈಸೂರು ಭಾಗಕ್ಕೆ ಪ್ರಸಾದ್‌ರಂತಹ ಮತ್ತೊಬ್ಬ ನಿಸ್ವಾರ್ಥ ದಲಿತ ನಾಯಕ ಸಿಗಲಾರರು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನಾ ಭಾವಚಿತ್ರಕ್ಕೆ ಗಣ್ಯರೊಡನೆ ಪುಷ್ಪಾರ್ಚನೆ ಮಾಡಿ ನುಡಿನಮನಕ್ಕೆ ಚಾಲನೆ ನೀಡಿದ ಶ್ರೀನಿವಾಸಪ್ರಸಾದ್ ಅವರ ಒಡನಾಡಿಯಾಗಿದ್ದ ಬಾಲ್ಯದ ಗೆಳೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾ.ವೆಂಕಟರಾಮ್ ಅವರು, ಬಹಳ ಭಾವುಕರಾಗಿ ಪ್ರಸಾದ್ ಅವರ ವ್ಯಕ್ತಿತ್ವವನ್ನು ಎಳೆ ಎಳೆಯಾಗಿ ತೆರೆದಿಟ್ಟರು.
ಮಾಜಿ ಮೇಯರ್ ಪುರುಷೋತ್ತಮ್, ಕೆ.ಆರ್.ಬ್ಯಾಂಕ್ ನಿರ್ದೇಶಕ ವಾಸು, ಪ್ರಸಾದ್ ಸಹೋದರ ಹಾಗೂ ಆದಿ ಕರ್ನಾಟಕ ಸಂಸ್ಥೆ ಅಧ್ಯಕ್ಷ ರಾಮಸ್ವಾಮಿ, ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ, ಲೇಖಕಿ ಕೆ.ಲೀಲಾ ಪ್ರಕಾಶ್, ಚೆನ್ನಕೇಶವ ಮೂರ್ತಿ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ವಿಶ್ವಮಾನವ ಮಹಾನಾಯಕ ಪ್ರತಿಷ್ಠಾನದ ಅರುಣ್ ಬುದ್ಧ, ದೊರೆಸ್ವಾಮಿ ಅವರು ನುಡಿ ನಮನ ಸಲ್ಲಿಸಿದರು.
‘ಹುಲಿ ದುರ್ಗ’ ಸಿನಿಮಾ ಖ್ಯಾತಿಯ ಚಲನ ಚಿತ್ರ ನಾಯಕನಟ ಸುಪ್ರೀತ್, ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವ ರಾಜೇಂದ್ರ ಸ್ವಾಮಿ, ಮೈಸೂರು ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಗೋಲ್ಡ್ ಸುರೇಶ್, ವಿವಿಧ ಸಂಘಟನೆಯ ಮನು, ಲೋಕೇಶ್, ಬಬಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net