ಶ್ರೀನಿವಾಸ ಪ್ರಸಾದ್ ಶ್ರದ್ಧಾಂಜಲಿ ಸಭೆ

30 ckm 7
ಚಿಕ್ಕಮಗಳೂರು ಆಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಎಸ್‌ಸಿ ಎಸ್‌ಟಿ ಮೋರ್ಚಾದಿಂದ ಶ್ರೀನಿವಾಸ ಪ್ರಸಾದ್ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಪ್ರಮುಖರಾದ ಕೆ.ಪಿ.ವೆಂಕಟೇಶ್, ರೇವನಾಥ್, ಪುಟ್ಟಸ್ವಾಮಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಶಾಸಕರಾಗಿ, ಸಂಸದರಾಗಿ ರಾಜಕೀಯ ತುಂಬು ಜೀವನ ನಡೆಸಿರುವ ಶ್ರೀನಿವಾಸ್ ಪ್ರಸಾದ್ ಅವರ ನಿಧನ ರಾಜಕೀಯ ಕ್ಷೇತ್ರಕ್ಕೆ ಹಾಗೂ ಸಾರ್ವಜನಿಕರಿಗೆ ತುಂಬಲಾರದ ನಷ್ಟ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ ವೆಂಕಟೇಶ್ ಹೇಳಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಎಸ್‌ಸಿ ಮೋರ್ಚಾ ವತಿಯಿಂದ ಏರ್ಪಡಿಸಲಾಗಿದ್ದ ಮಾಜಿ ಸಚಿವ ದಿವಂಗತ ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ ಕೊಡುವಲ್ಲಿ ಮುಂಚೂಣಿ ಪಾತ್ರ ವಹಿಸಿರುವ ಅವರು ರಾಜ್ಯದಲ್ಲಿ ದಲಿತ ಸಮುದಾಯದ ಬಂಧುವಾಗಿ ಅವರ ಏಳಿಗೆಗೆ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅಜಾತ ಶತೃವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಬಣ್ಣಿಸಿದರು.
ಹಿರೇಮಗಳೂರು ರೇವನಾಥ್ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ರವರ ಅಗಲಿಕೆಯಿಂದ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ವಕ್ತಾರ ಎಚ್.ಎಸ್.ಪುಟ್ಟಸ್ವಾಮಿ ಮಾತನಾಡಿ, ದಿವಂಗತ ಶ್ರೀನಿವಾಸ್ ಪ್ರಸಾದ್ ಅವರು ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದಾಗ ಅನೇಕ ಬದಲಾವಣೆ ಮಾರ್ಪಾಡುಗಳನ್ನು ತಂದಿದ್ದರು. ಅದರಲ್ಲಿ ಪ್ರಮುಖವಾಗಿ ಪಡಿತರ ಚೀಟಿಯಲ್ಲಿ ಆಧುನಿಕತೆಯನ್ನು ಅಳವಡಿಸಿದ್ದನ್ನು ಸ್ಮರಿಸಿದರು.
ಅವರು ಕೆಲಸ ಮಾಡಿದ ಕಡೆಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತಿದ್ದರು. ಕಂದಾಯ ಸಚಿವರಾಗಿದ್ದಾಗ ಅರಣ್ಯ ಭೂಮಿ ಒತ್ತುವರಿ ಬಗ್ಗೆ ಹಾಗೂ ಬಡವರ ಬೇರೆ ಬೇರೆ ಸಮಸ್ಯೆಗಳ ಸಂಕಷ್ಟಗಳನ್ನು ಪರಿಹರಿಸಿದ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜೆ.ಡಿ.ಲೋಕೇಶ್, ಕೇಶವಮೂರ್ತಿ, ರಾಜಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net