

ಮೈಸೂರು: ಚಾಮರಾಜ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಯಾವುದೇ ಪಕ್ಷಕ್ಕೂ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ಘೋಷಿಸಿಲ್ಲ. ಆದರೆ, ಅವರು ಬಿಜೆಪಿಯೊಂದಿಗೆ ಇದ್ದಾರೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ ಎಂದು ವಿ.ಶ್ರೀನಿವಾಸ ಪ್ರಸಾದ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು.
ವಿ.ಶ್ರೀನಿವಾಸ ಪ್ರಸಾದ್ ಯಾವುದೇ ರಾಜಕೀಯ ಪಕ್ಷದೊಡನೆ ಗುರುತಿಸಿಕೊಂಡಿಲ್ಲ. ತಮ್ಮ ಬೆಂಬಲಿಗರು ತಮಗೆ ತೋಚಿದ ಪಕ್ಷ ಸೇರುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಅವರ ಸಲಹೆಯಂತೆ ನಾವು ಕಾಂಗ್ರೆಸ್ ಪಕ್ಷ ಸೇರಿದ್ದೇವೆ. ವಿ.ಶ್ರೀನಿವಾಸ ಪ್ರಸಾದ್ ಕುರಿತು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಯಾರು ಸಹ ಕಿವಿಗೊಡಬಾರದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಿ.ಶ್ರೀನಿವಾಸ ಪ್ರಸಾದ್ ಬೆಂಬಲಿಗರಾದ ಭರತ್ ರಾಮಸ್ವಾಮಿ, ಸಿ.ಎಂ. ರಮೇಶ್, ಅಯ್ಯನಪುರ ಶಿವಕುಮಾರ್, ಶಾಂತರಾಮ್ ಶೆಟ್ಟಿ ಇದ್ದರು.