

ಬೆಂಗಳೂರು: 4 ಎಕ್ಸ್ ಮೀಡಿಯಾ ಮತ್ತು ಸ್ಪಾರ್ಕ್ ಈವೆಂಟ್ ಸಹಯೋಗದಲ್ಲಿ ಆಯೋಜಿಸಿರುವ ರಾಜಾಜಿನಗರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಉತ್ಸವ -2025ರ 2ನೇ ದಿನದ ಕಾರ್ಯಕ್ರಮದಲ್ಲಿ ಶ್ರೀನಿವಾಸ ಕಲ್ಯಾಣವು ಅದ್ಧೂರಿಯಾಗಿ ಜರುಗಿತು.
ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಹಮ್ಮಿಕೊಂಡಿರುವ 3 ದಿನಗಳ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶನಿವಾರ ಸಂಜೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಆಗಮಿಸಿದ ಸಾರ್ವಜನಿಕರು ಪೂಜೆ ಮತ್ತಿತರ ಧಾರ್ಮಿಕ ವಿಧಿವಿಧಾನಗಳನ್ನು ಕಣ್ತುಂಬಿಕೊಂಡರು.
ಸಂಜೆ 5 ಗಂಟೆಗೆ ಆಗಮಿಸಿದ ಕಲರ್ಸ್ ಕನ್ನಡ ವಾಹಿನಿಯ ಮಹರ್ಷಿ ದರ್ಶನ ಕಾರ್ಯಕ್ರಮದ ಖ್ಯಾತಿಯ ಶ್ರೀವಿದ್ಯಾಶಂಕರಾನಂದ ಸರಸ್ವತಿ ಗುರೂಜಿಯವರನ್ನು ರಾಮಮಂದಿರದಿಂದ ಮೈದಾನದವರೆಗೆ ಶೋಭಾಯಾತ್ರೆಯ ಮೂಲಕ ಕರೆತರಲಾಯಿತು. ನಂತರ ಗುರೂಜಿ ಸಾನ್ನಿಧ್ಯದಲ್ಲಿ ಶ್ರೀನಿವಾಸ ಕಲ್ಯಾಣದ ಪೂಜಾ ಪ್ರಕ್ರಿಯೆಗಳನ್ನು ಆರಂಭಿಸಲಾಯಿತು. ಟಿಟಿಡಿಯ ದಾಸಸಾಹಿತ್ಯ ಪ್ರಸಾರ ವಿಭಾಗದ ಸಂಚಾಲಕರಾದ ವಾದಿರಾಜ ತಾಯಲೂರು ಅವರು ಶ್ರೀನಿವಾಸ ಕಲ್ಯಾಣೋತ್ಸವದ ಸಂಪೂರ್ಣ ವಿವರಗಳನ್ನು ಸಾರ್ವಜನಿಕರಿಗೆ ನೀಡಿದರು. ಕಲ್ಯಾಣೋತ್ಸವದ ನಂತರ ಆಗಮಿಸಿದ ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಸುರೇಶ್ ಕುಮಾರ್, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಮತ್ತಿತರ ಸ್ಥಳೀಯ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಆಹಾರ ಮೇಳ, ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸಾರ್ವಜನಿಕರು ಆಸಕ್ತಿಯಿಂದ ಪಾಲ್ಗೊಂಡು ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದರು. ವಾರಾಂತ್ಯವಾದ ಕಾರಣ ಉತ್ಸವದಲ್ಲಿ ದಿನಪೂರ್ತಿ ಜನದಟ್ಟಣೆ ಇತ್ತು.
ರಾಜಾಜಿನಗರ ಉತ್ಸವಕ್ಕೆ ಇಂದು ತೆರೆ
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜಾಜಿನಗರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಉತ್ಸವಕ್ಕೆ ಇಂದು (ಭಾನುವಾರ) ತೆರೆ ಬೀಳಲಿದೆ. ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ರಾಜಾಜಿನಗರ ಕ್ಷೇತ್ರದ ಸ್ಥಳೀಯ ಕಲಾವಿದರಿಂದ ವಿವಿಧ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ ಏರ್ಪಡಿಸಲಾಗಿದೆ.
ಇದೇ ವೇಳೆ ಬಟ್ಟೆ, ಅಲಂಕಾರಿಕ ವಸ್ತುಗಳು, ಪುಸ್ತಕ, ಔಷಧಿ, ಮತ್ತಿತರ ದಿನಬಳಕೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಕೂಡ ಇಂದು ತೆರೆಬೀಳಲಿದೆ. ದೇಶ ಮತ್ತು ರಾಜ್ಯದ ವಿವಿಧ ಪ್ರಾಂತ್ಯಗಳ ವಿಶೇಷ ಖ್ಯಾದ್ಯಗಳನ್ನು ಒಳಗೊಂಡಿರು ಆಕರ್ಷಕ ಆಹಾರ ಮೇಳವು ಇಂದು ಕೊನೆಗೊಳ್ಳಲಿದೆ.
-ಶ್ರೀವಿದ್ಯಾಶಂಕರಾನಂದ ಸರಸ್ವತಿ ಗುರೂಜಿ