

ಹೊಸಪೇಟೆ: ನಗರದ ರಾಣಿಪೇಟೆ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಬುಧವಾರ ಜರುಗಿತು. ಬೆಳಗ್ಗೆ ರಾಯರ ಬೃಂದಾವನಕ್ಕೆ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಕನಕಾಭಿಷೇಕ ನಡೆಯಿತು.
ನಂತರ ಶ್ರೀನಿವಾಸ ದೇವರ, ಶ್ರೀಪದ್ಮಾವತಿ ದೇವಿಯ ಉತ್ಸವ ಮೂರ್ತಿಗಳನ್ನು ಶ್ರೀಬಯಲು ಆಂಜನೇಯ ದೇಗುಲದವರೆಗೆ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಭಜನಾ ಮಂಡಳಿ ಸದಸ್ಯರು ಭಜನೆಯೊಂದಿಗೆ ಉತ್ಸವ ನೆರವೇರಿಸಿ ಶ್ರೀಮಠಕ್ಕೆ ಕರೆತಂದರು.
ಬಳಿಕ ಶ್ರೀನಿವಾಸ ದೇವರ ಉತ್ಸವ ಮೂರ್ತಿಗಳಿಗೆ ವಿಶೇಷವಾಗಿ ಅರಿಶಿನ, ಕುಂಕುಮ ಸೇರಿದಂತೆ ಮಂಗಳ ದ್ರವ್ಯಗಳ ಅಭಿಷೇಕ ಮಾಡಲಾಯಿತು. ಗಣಪತಿ ಪೂಜೆ, ಅಲಂಕಾರ, ಆರತಕ್ಷತೆಯೊಂದಿಗೆ ಮಾಂಗಲ್ಯ ಧಾರಣೆ ನೆರವೇರಿಸುವ ಮೂಲಕ ಕಲ್ಯಾಣೋತ್ಸವ ಭಕ್ತಿ-ಶ್ರದ್ಧೆಯಿಂದ ನಡೆಯಿತು. ವಿವಿಧ ಭಜನಾ ಮಂಡಳಿ ಸದಸ್ಯರು ಸಾಮೂಹಿಕ ಭಜನೆ, ಕೀರ್ತನೆ ನೆರವೇರಿಸಿದರು.