

ಕೆರೂರ: ಪಟ್ಟಣದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ‘ಶ್ರೀನಿವಾಸ ಕಲ್ಯಾಣೋತ್ಸವ’ ಭಕ್ತ ಸಮೂಹದ ಮಧ್ಯೆ ಅದ್ದೂರಿಯಾಗಿ ನೆರವೇರಿತು. ಶ್ರೀನಿವಾಸ ಕಲ್ಯಾಣೋತ್ಸವ ನಿಮಿತ್ತ ಬೆಳಗ್ಗೆ 8.30ಕ್ಕೆ ಶ್ರೀನಿವಾಸ ಮತ್ತು ಪದ್ಮಾವತಿ ದೇವರ ಶೋಭಾಯಾತ್ರೆ ಪಟ್ಟಣದ ಹೊಸಪೇಟೆಯ ಪತ್ತಾರ ಕಟ್ಟಿಯ ಮಾರುತೇಶ್ವರ ದೇವಸ್ಥಾನದಿಂದ ಸಕಲ ಮಂಗಳ ವಾದ್ಯಮೇಳದೊಂದಿಗೆ ಆರಂಭವಾಗಿ, ಕಾಯಿಪಲ್ಲೆ ಮಾರುಕಟ್ಟೆ, ವೆಂಕಟೇಶ್ವರ ದೇವಸ್ಥಾನ, ಚರಂತಿಮಠದ ಮಾರ್ಗವಾಗಿ ಸಂಚರಿಸಿ ಬಸ್ ನಿಲ್ದಾಣದಿಂದ ಹೆದ್ದಾರಿ ಮೂಲಕವಾಗಿ ಎಂ.ಎಚ್. ಮೆಣಸಗಿ ಕಾಲೇಜು ಆವರಣದ ಬಹತ್ ವೇದಿಕೆ ಸೇರಿತು.
ಮಾರ್ಗದುದ್ದಕ್ಕೂ ಮಹಿಳೆಯರು ರಂಗೋಲಿ ಹಾಕಿದ್ದು ಪುರಜನ ಭಕ್ತಿಯಿಂದ ಮೆರವಣಿಗೆ ಹಾಗೂ ದೇವರ ಪಲ್ಲಕ್ಕಿಯನ್ನು ಸ್ವಾಗತಿಸಿದರು. ಮೆರವಣಿಗೆಯಲ್ಲಿ ಮೊಳಗಿದ ಶ್ರೀ ಕಷ್ಣನ ಜೀವನ ಹಾಗೂ ಸಂದೇಶ ಕುರಿತಾದ ಹಾಡುಗಳು ಹಾಗೂ ಭಜನಾ ಗೀತೆಗಳು ಸಾರ್ವಜನಿಕರಲ್ಲಿ ಭಕ್ತಿ ಹೆಚ್ಚಿಸಿದವು.
ಮಧ್ಯಾಹ್ನ 3 ಗಂಟೆಗೆ ಶ್ರೀನಿವಾಸ ಮತ್ತು ಪದ್ಮಾವತಿಯ ಜೀವನ ಚರಿತ್ರೆ ಕುರಿತ ದಾಸವಾಣಿ, ಕೋಲಾಟ, ವಿವಿಧ ಸ್ಪರ್ಧೆಗಳು ವೈಭವದಿಂದ ಜರುಗಿದವು. ಸಂಜೆ ಗೋಧೂಳಿ ಮುಹೂರ್ತಕ್ಕೆ ಪ್ರಾರಂಭವಾದ ಲಕ್ಷ್ಮಿ ವೆಂಕಟೇಶ ಹಾಗೂ ಪದ್ಮಾವತಿಯ ವಿವಾಹ ಮಹೋತ್ಸವ ಸತತ 3 ಗಂಟೆಗಳ ಕಾಲ ವೈಭವದಿಂದ ಜರುಗಿ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.
ಅರಿಶಿನ ಶಾಸ, ಸುರಗಿ ಸುತ್ತುವುದು, ವರೋಪಚಾರ, ಮದುವೆಯ ಹಲವಾರು ವಿಧಿ ವಿಧಾನಗಳನ್ನು ಪೂರೈಸಿದರು. ಹರೇ ಶ್ರೀನಿವಾಸ, ಹರೇ ವೆಂಕಟೇಶ ಹಾಗೂ ಗೋವಿಂದಾ ಗೋವಿಂದಾ ಎಂಬ ಭಕ್ತಿಯ ಉದ್ಘೋಷಗಳು ಎಲ್ಲೆಡೆ ಮೊಳಗಿದವು.
ಸಭಾ ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಸಾವಿರಾರು ಜನ ಅನ್ನಪ್ರಸಾದ ಸವಿದರು. ಕಾರ್ಯಕರ್ತರು ಹಿರಿಯರ ಮಾರ್ಗದರ್ಶನದಲ್ಲಿ ಅನ್ನಸಂತರ್ಪಣೆ, ವಿವಿಧ ಸೇವಾ ಕಾರ್ಯದಲ್ಲಿ ತೊಡಗಿದರು.
ಶ್ರೀ ವಿಜಯೇಂದ್ರ ಆಚಾರ್ಯ ಜೋಶಿ, ಲಲಿತಾ ಕೊಣ್ಣೂರ, ಗಿರಿಜಾ ಪರದೇಶಿ, ದೀಪಾ ಪರದೇಶಿ, ದಾನಮ್ಮ ಮುಳಗುಂದ, ಜಯಶ್ರೀ ಸುಟಗಲ್, ಮಂಜುಳಾ ಹಣಗಿ, ಜಯಶ್ರೀ ಮಾನ್ವಿ, ವಿದ್ಯಾಶ್ರೀ ಪರದೇಶಿ, ರೋಹಿಣಿ ಪರದೇಶಿ, ರುಕ್ಮಿಣಿ ಕೊಣ್ಣೂರ, ಹಾಗೂ ಪಟ್ಟಣದ ವಿವಿಧ ಭಜನಾ ಮಂಡಳಿ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.