ಕಾಸರಗೋಡು: ಕುಂಬಳೆ ಸಮೀಪದ ಮುಂಡಪಳ್ಳದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಡಿ.25ರಂದು ಶ್ರೀವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ ನಡೆಯಲಿದೆ. ಬೆಂಗಳೂರಿನ ಶ್ರೀ ರಾಮಾನುಜ ಮಠದ ಮೋಹನ ಕೃಷ್ಣ ಆಚಾರ್ಯ ಮತ್ತು ಸಹ ಆಚಾರ್ಯರ ನೇತೃತ್ವದಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲು ದೇವಸ್ಥಾನದ ಆಡಳಿತ ಸಮಿತಿ ತೀರ್ಮಾನಿಸಿದೆ. ಸಮಾರಂಭದಲ್ಲಿ ಹತ್ತು ಸಾವಿರದಷ್ಟು ಭಕ್ತರು ಸೇರುವ ನಿರೀಕ್ಷೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿ ಸಿದ್ಧತಾ ಕಾರ್ಯ ನಡೆಸಿದೆ.
ಬೆಳಗ್ಗೆ 7.30ರಿಂದ ಫಲಪಂಚಾಮೃತ ಅಭಿಷೇಕ, ನಿತ್ಯ ವಿಧಿ, ತಿರುಮಂಜನ ಸೇವೆ, 8.30ರಿಂದ ಕೋಮಲ ಸೇವೆ, ಪೀತಾಂಬರ ಸಮರ್ಪಣೆ 10.30ಕ್ಕೆ ತಿರುಪಾವಡಿ ಸೇವೆ, ಆರತಿ ತೀರ್ಥ, ಪ್ರಸಾದ ವಿತರಣೆ ಸಂಜೆ 4ಕ್ಕೆ ಗರುಡೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಮತ್ತು 7.30ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾಅನ್ನಪ್ರಸಾದ ವಿತರಣೆ ನಡೆಯಲಿದೆ.
ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರನ್ನು ಸನ್ಮಾನಿಸಲಾಗುವುದು. ಡಾ.ಸತ್ಯಪ್ರಕಾಶ್ ಶೆಟ್ಟಿ ಮುಂಬೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದ ಸಂಘಟಕ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ ಉಪಸ್ಥಿತರಿರುವರು.