ಪುತ್ತೂರು: ಈ ವರ್ಷವೂ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಬೇಕೆಂಬ ಭಕ್ತರ ಅಪೇಕ್ಷೆಯಂತೆ ಡಿ.೨೮, ೨೯ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದರ ಪೂರ್ವಭಾವಿಯಾಗಿ ಡಿ.೧೫ರಂದು ರಥದ ಕೊಟ್ಟಿಗೆ ಸಮೀಪದಲ್ಲಿ ಸೇವಾ ಕೌಂಟರ್ ಹಾಗೂ ಭೂಮಿಪೂಜೆ ನಡೆಯಲಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಧಾರ್ಮಿಕ ಶ್ರದ್ಧೆಯನ್ನು ಅಧಃಪತನಕ್ಕೆ ತೆಗೆದುಕೊಂಡು ಹೋಗುವ ಕೆಲಸದ ಜತೆಗೆ ಹಿಂದು ವಿರೋಽ ಧೋರಣೆಯಲ್ಲಿ ಸರ್ಕಾರಿ ಪ್ರಾಯೋಜಿತವಾಗಿ ಹಲವು ಕಾರ್ಯ ನಡೆಯುತ್ತಿದೆ. ಇದು ಹಿಂದು ಸಮಾಜಕ್ಕೆ ದೊಡ್ಡ ದುರಂತವಾಗಿದ್ದು, ಸಮಾಜ ಸಂಘಟಿತವಾಗಿರುವ ಸಂದೇಶ ನೀಡಬೇಕಾಗಿದೆ. ಹಿಂದು ಸಮಾಜ ಕಲ್ಯಾಣ ಆಗಬೇಕು ಎಂಬ ನಿಟ್ಟಿನಲ್ಲಿ ಎರಡು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುತ್ತೂರಿನಲ್ಲಿ ಬೂತುಮಟ್ಟದಲ್ಲಿ ಪ್ರತಿ ಮನೆಗೆ ಹೋಗಿ ಆಮಂತ್ರಣ ನೀಡುವ ಕಾರ್ಯ ಭರದಿಂದ ನಡೆಯುತ್ತಿದೆ. ಕಡಬ, ಸುಳ್ಯ ಸೇರಿ ವಿವಿಧ ತಾಲೂಕುಗಳಲ್ಲಿ ಸಮಿತಿಯವರು ಆಮಂತ್ರಣ ನೀಡುತ್ತಿದ್ದಾರೆ. ಸುಮಾರು ೭೫ ಸಾವಿರ ಮಂದಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಿದ್ದು, ೨೫ ಸಾವಿರ ಲಡ್ಡು ಪ್ರಸಾದಕ್ಕೆ ಸಿದ್ಧತೆ ಮಾಡಲಾಗಿದೆ. ಡಿ.೨೦ರ ಮೊದಲು ಗ್ರಾಮಗಳಿಂದ ಸೇವಾ ರಸೀದಿಗಳನ್ನು ತರಿಸಿಕೊಂಡು ಯಾವುದೇ ಕೊರತೆಯಿಲ್ಲದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್, ಗೌರವಾಧ್ಯಕ್ಷ ಶಶಾಂಕ ಕೊಟೇಚಾ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಪ್ರಚಾರ ಸಮಿತಿಯ ಸಂಚಾಲಕ ನವೀನ್ ರೈ ಪಂಜಳ ಮತ್ತಿತರರು ಉಪಸ್ಥಿತರಿದ್ದರು.
ಹೊರೆಕಾಣಿಕೆ ಸಮರ್ಪಣೆ
ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಡಿ.೨೭ರಂದು ಪುತ್ತೂರು ದರ್ಬೆ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರುಗದ್ದೆಗೆ ಹೊರಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಲಿದೆ. ಪ್ರತಿ ಗ್ರಾಮದ ದೇವಸ್ಥಾನಗಳಲ್ಲಿ ಸಂಗ್ರಹ ಮಾಡಿ ಅಲ್ಲಿಂದ ವಾಹನದ ಮೂಲಕ ದರ್ಬೆಗೆ ತರಲಾಗುವುದು. ೨೯ರಂದು ಬೆಳಗ್ಗೆ ೫.೩೦ರಿಂದ ಸುಪ್ರಭಾತ ಪೂಜಾ ಸೇವೆಯ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿ ಸಂಜೆ ೬ರಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಮಧ್ಯಾಹ್ನ ಭಜನಾ ತಂಡಗಳಿಂದ ಭಜನೋತ್ಸವ, ಸಂಜೆ ಶ್ರೀ ಹರಿಗಾನಾಮೃತ ನಡೆಯಲಿದೆ.
ಧರ್ಮ ಸಂಗಮ:
ಶ್ರೀನಿವಾಸ ದೇವರನ್ನು ೨೮ರಂದು ಸಂಜೆ ೪ಕ್ಕೆ ಬೊಳುವಾರಿನಲ್ಲಿ ಬರಮಾಡಿಕೊಳ್ಳಲಿದ್ದು, ಬೃಹತ್ ಶೋಭಾಯಾತ್ರೆಯ ಮೂಲಕ ದೇವಮಾರು ಗದ್ದೆಗೆ ಕರೆದುಕೊಂಡು ಬರಲಿದ್ದಾರೆ. ಬಳಿಕ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಹಿಂದು ಸಮಾಜಕ್ಕೆ ಶಕ್ತಿಯನ್ನು ನೀಡುವ ಧರ್ಮ ಸಂಗಮ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.