ಲೋಪರಹಿತವಾಗಿ ಗ್ಯಾರಂಟಿ ಅನುಷ್ಠಾನ

chn may 28 meeting. (2)
Published on

ಚನ್ನಗಿರಿ: ರಾಜ್ಯ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳು ಲೋಪದೋಷ ಬಾರದ ರೀತಿಯಲ್ಲಿ ಜನರಿಗೆ ಸಿಗಬೇಕು. ಇದರಲ್ಲಿ ತಪ್ಪು ನಡೆದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ತಿಳಿಸಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ಮಾತು ನೀಡಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಈಗಾಗಲೇ ಯಾವುದೆ ತೊಂದರೆ ಇಲ್ಲದೆ 2 ವರ್ಷ ಅಧಿಕಾರವನ್ನು ಮುಗಿಸಿದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆ ಮೂಲಕ ಲಕ್ಷಾಂತರ ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರದ ಜತೆಗೆ ಸರ್ಕಾರಿ ಅಧಿಕಾರಿಗಳ ಪ್ರಾಮಾಣಿಕ ಕೆಲಸವೂ ಇದಕ್ಕೆ ಕಾರಣ ಎಂದರು.

ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಮೊದಲು ಅಂಗಡಿಯ ಮುಂದೆ ನಾಮಫಲಕ ಅಳವಡಿಸಿಕೊಳ್ಳಬೇಕು. ತಿಂಗಳಲ್ಲಿ ನಾಲ್ಕು ದಿನ ಮಾತ್ರ ಪಡಿತರ ವಿತರಿಸುತ್ತಿರುವ ಮಾಹಿತಿ ಇದೆ. ಹೀಗಾದರೆ ನೈಜ ಫಲಾನುಭವಿಗಳು ವಂಚಿತರಾಗುತ್ತಾರೆ. ಕನಿಷ್ಠ 10 ದಿನವಾದರೂ ಪಡಿತರ ವಿತರಿಸಬೇಕು. ಈಗಾಗಲೇ ಸರ್ಕಾರ ಸಹಾಯವಾಣಿ ನೀಡಿದ್ದು, ದೂರುಗಳು ನೇರವಾಗಿ ಮುಖ್ಯಮಂತ್ರಿಗಳಿಗೆ ಹೋಗುವುದರಿಂದ ಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಬಳಿ ಹೊಸದಾಗಿ ನಿರ್ವಣವಾದ ಸರ್ಕಾರಿ ಬಸ್ ಡಿಪೋ ಜೂನ್ ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ಇದರಿಂದ ತಾಲೂಕಿನಲ್ಲಿ ಹೊಸದಾಗಿ 30 ರಸ್ತೆ ಮಾರ್ಗಗಳ ಮೂಲಕ ಬಸ್ ಓಡಾಡಲಿದೆ. ಅಧಿಕಾರಿಗಳು ಯಾವ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ ಎಂಬುದನ್ನು ತಿಳಿಸಬೇಕು ಎಂದರು.

ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಸೈಯದ್ ಜಬೀವುಲ್ಲಾ, ನಲ್ಲೂರು ಗುಡ್ಡಪ್ಪ, ನಾರಶೆಟ್ಟಿಹಳ್ಳಿ ಚಂದ್ರಪ್ಪ, ಈರಗನಹಳ್ಳಿ ಮಧು, ಮರಬನಹಳ್ಳಿ ಆಂಜನೇಯ, ಎಂ.ಸಿ. ಪಾಟೀಲ್, ಸತೀಶ್, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಬಿ.ಕೆ. ಉತ್ತಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net