

ದಾವಣಗೆರೆ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಕೋಮು ಪ್ರಚೋದನೆ ಹಾಗೂ ರಾಷ್ಟ್ರದ್ರೋಹದ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಟಿ. ದಾಸಕರಿಯಪ್ಪ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
ಸನಾತನ ಹಿಂದು ಧರ್ಮದ ಬಗ್ಗೆ ಸಚಿವರು ತನ್ನ ಹೆತ್ತ ತಾಯಿಯಿಂದ ಹಿಂದು, ಸಂಸ್ಕೃತಿ, ಸಂಸ್ಕಾರ ಮೊದಲು ಕಲಿಯಲಿ. ಹಿಂದು ಧರ್ಮ ಅವಮಾನಿಸಿದರೆ ಹೆತ್ತ ತಾಯಿಯನ್ನೇ ಅವಮಾನಿಸಿದಂತೆ ಎಂಬುದನ್ನು ಅರಿಯಲಿ ಎಂದು ತಿರುಗೇಟು ನೀಡಿದ್ದಾರೆ.
ಸನಾತನ ಧರ್ಮವನ್ನು ಡೆಂೆ, ಕರೊನಾ, ಮಲೇರಿಯಾಕ್ಕೆ ಸಮಾನವಾದದ್ದು ಎಂಬ ಹೇಳಿಕೆ ನೀಡಿರುವುದು ಅಕ್ಷಮ್ಯ ಹಾಗೂ ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಉದಯ ನಿಧಿ ಅವರು ಓಲೈಕೆ ಮತ್ತು ಮತ ಬ್ಯಾಂಕ್ ರಾಜಕೀಯ ಬಿಡಬೇಕು. ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು ಎಂದಿದ್ದಾರೆ.
ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳ ವಿರುದ್ಧವಿರುವ ಇಂತಹ ಮೈತ್ರಿಕೂಟ ದೇಶದ ಶೇ. 80ರಷ್ಟು ಹಿಂದು ಸನಾತನ ಧರ್ಮದವರನ್ನು ಅವಮಾನಿಸಿದ್ದಲ್ಲದೆ, ಧರ್ಮಗಳ ನಡುವೆ ಕಿತ್ತಾಟ ಹಚ್ಚಲು ಯತ್ನಿಸುತ್ತಿದೆ. ಇದರ ಪರಿಣಾಮ ದೇಶದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಬಹುದು ಎಂದು ಹೇಳಿದ್ದಾರೆ.
ಹಿಂದು ಧರ್ಮ ನಾಶ ಮಾಡಲು ಬಂದವರೆ ನಾಶವಾದ ಇತಿಹಾಸವನ್ನು ನಿರಂತರ ಕಾಣಬಹುದು. ಸನಾತನ ಧರ್ಮ ಅನಾದಿ ಕಾಲದಿಂದಲೂ ಇರುವಂತಹದ್ದು. ಇಂತಹ ಆಲದ ಮರ ಸರ್ವೇ ಜನೋ ಸುಖಿನೋಭವಂತು ಎಂದು ಸಾರಿಕೊಂಡು ಬಂದಿದೆ. ಇಂತಹ ಸನಾತನ ಧರ್ಮದ ಬಗ್ಗೆ ಹಗುರ ಹೇಳಿಕೆ ಸಹಿಸಲಾಗದು ಎಂದು ಹೇಳಿದ್ದಾರೆ.