ಇಂದು ಉಡುಪಿಗೆ ಶೃಂಗೇರಿ ಶ್ರೀ ಆಗಮನ

UDP-1-SRINGERI SRI
Published on

ಉಡುಪಿ: ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಮಾ. 2ರಿಂದ 5ರ ವರಗೆ ಉಡುಪಿಯಲ್ಲಿ ಮೊಕ್ಕಾಂ ಹೂಡಲಿದ್ದು, ವಿವಿಧ ಕಾರ‌್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಾ. 2ರಂದು ಕುಂಜಿಬೆಟ್ಟು ಶಾರದಾ ಮಂದಿರಕ್ಕೆ ಆಗಮಿಸಲಿದ್ದು, ಸಾಯಂಣಕಾಲ 5.30ಕ್ಕೆ ಶ್ರೀಗಳನ್ನು ಎಂಜಿಎಂ ಕಾಲೇಜಿನಿಂದ ದೇವಳದವರೆಗೆ ಪೂರ್ಣಕುಂಭ ಸ್ವಾಗತದ ಮೂಲಕ ಮೆರವಣಿಗೆಯಲ್ಲಿ ಸ್ವಾಗತಿಸಲಾಗುವುದು. ನಂತರ ಧೂಳಿಪಾದಪೂಜೆ, ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ ಎಂದು ಸ್ಥಾನಿಕ ಬ್ರಾಹ್ಮಣ ಸಂಘ ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ. 3ರಂದು ಬೆಳಿಗ್ಗೆ 8 ಗಂಟೆಗೆ ಶಾರದಾ ಮಂದಿರದಲ್ಲಿ ಶಾರದಾಂಬೆಯ ಕೃಷ್ಣಶಿಲಾ ಬಿಂಬದ ಪ್ರತಿಷ್ಠಾಪನೆ ಬಳಿಕ ಶ್ರೀಗಳು ಕುಂಭಾಭಿಷೇಕ ನೆರವೇರಿಸಲಿದ್ದಾರೆ. 9ರಿಂದ 10.30ರ ವರೆಗೆ ಶೃಂಗೇರಿ ಶಾಂಕರ ತತ್ವ ಪ್ರಸಾರ ಅಭಿಯಾನದ 400 ಮಂದಿ ಸದಸ್ಯರನ್ನೊಳಗೊಂಡ 60 ಭಜನಾ ತಂಡಗಳಿಂದ ಭಜನೆ ಸಮರ್ಪಣೆ ನಡೆಯಲಿದ್ದು, ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಸಾಯಂಕಾಲ 4 ಗಂಟೆಗೆ ಕಡಿಯಾಳಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಮಾ. 4ರಂದು ಬೆಳಿಗ್ಗೆ 10.30ಕ್ಕೆ ಸಾಲಿಕೇರಿ ಪದ್ಮಶಾಲಿ ಸಮಾಜದ ಶ್ರೀ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಬಳಿಕ ಕೊಡವೂರು ಲಕ್ಷ್ಮೀನಗರದಲ್ಲಿ ಸ್ಥಾಪಿಸಲುದ್ದೇಶಿಸಿರುವ ಶೃಂಗೇರಿ ಶಾಖಾ ಮಠದ ನಿವೇಶನ ವೀಕ್ಷಣೆ ನಡೆಸಲಿದ್ದಾರೆ. 11.30 ಗಂಟೆಯಿಂದ ಶೃಂಗೇರಿ ಮಠದ ಶಿಷ್ಯವರ್ಗದವರಿಂದ ಪಾದಪೂಜೆ, ಭಿಕ್ಷಾವಂದನೆ ಇತ್ಯಾದಿ ಕಾರ‌್ಯಕ್ರಮ ನಡೆಯಲಿದ್ದು, ಸಾಯಂಕಾಲ 4 ಗಂಟೆಗೆ ಶಿವಪಾಡಿ ದೇವಳಕ್ಕೆ ತೆರಳಿ, ಮೊಕ್ಕಾಂ ಹೂಡಲಿದ್ದಾರೆ. ಮಾ. 5ರಂದು ಶಿವಪಾಡಿ ಉಮಾಮಹೇಶ್ವರ ದೇವಳದಲ್ಲಿ ನಡೆಯುತ್ತಿರುವ ಅತಿರುದ್ರ ಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಿ, ಸಾಯಂಕಾಲ ಬೆಳ್ತಂಗಡಿಗೆ ತೆರಳುವರು ಎಂದು ಹೆಬ್ಬಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ಥಾನಿಕ ಬ್ರಾಹ್ಮಣ ಸಂಘ ಕಾರ‌್ಯದರ್ಶಿ ಪ್ರಭಾಕರ ಭಂಡಿ, ಶೃಂಗೇರಿ ಶಾಂಕರ ತತ್ವ ಪ್ರಸಾರ ಅಭಿಯಾನ ಜಿಲ್ಲಾ ಸಂಚಾಲಕ ವಿಶ್ವನಾಥ ಶಾನುಭೋಗ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net