ಆತ್ಮೋದ್ಧಾರಕ್ಕೆ ಶಂಕರ ಭಗವತ್ಪಾದರ ಸಂದೇಶ ಪಾಲಿಸಿ, ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ

IMG-20250413-WA0003.jpg
Published on

ಹುಬ್ಬಳ್ಳಿ: ಹುಟ್ಟಿದ ಪ್ರತಿಯೊಬ್ಬರ ಆತ್ಮೋದ್ಧಾರಕ್ಕೆ ಶ್ರೀ ಶಂಕರ ಭಗವತ್ಪಾದರು ಸಂದೇಶಗಳನ್ನು ನೀಡಿದ್ದಾರೆ. ಮನುಷ್ಯ ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳಲು ಅವುಗಳನ್ನು ಪಾಲನೆ ಮಾಡಬೇಕು, ಆಗಲೇ ಜೀವನ ಸಾರ್ಥಕವಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.

ಶ್ರೀಗಳ ವಿಜಯಯಾತ್ರೆ ಅಂಗವಾಗಿ ಇಲ್ಲಿಯ ಹೊಸೂರಲ್ಲಿರುವ ಶಂಕರ ಸದನ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಹಿಂದು ಧರ್ಮ ಉದ್ಧಾರ ಮಾಡಲು ನಮ್ಮ ಪೂಜ್ಯರು ಹಲವಾರು ಉಪದೇಶಗಳನ್ನು ಮಾಡಿದ್ದಾರೆ. ಸಮಾಜದ ಏಳ್ಗೆಗೆ ಅನೇಕ ವಿಚಾರಗಳನ್ನು ಸನಾತನ ಗ್ರಂಥಗಳು ಹೇಳಿವೆ. ಭಗವದ್ಗೀತೆಯಲ್ಲಿ ಭಗವಂತನು ಯಾವುದೇ ಕೆಲಸದಲ್ಲಿ ಸಫಲತೆ ಬೇಕಾದರೆ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿಸಿಕೊಟ್ಟಿದ್ದಾನೆ ಎಂದರು.

ಪ್ರತಿಯೊಬ್ಬರೂ ಕೆಲಸ ಮಾಡುತ್ತಾರೆ. ಆದರೆ, ಸಫಲತೆಯನ್ನು ಕೆಲವರು ಮಾತ್ರ ಪಡೆಯುತ್ತಾರೆ. ಹೀಗೇಕೆ ಎಂಬುದು ಎಲ್ಲರ ಪ್ರಶ್ನೆ. ಕರ್ತೃತ್ವ ಸರಿಯಾಗಿದ್ದರೆ ಫಲವೂ ಚೆನ್ನಾಗಿ ಸಿಗುತ್ತದೆ ಎಂದರು.

ಕರ್ತೃತ್ವ ಸರಿಯಾಗಿ ಇರಬೇಕಾದರೆ ಸಾತ್ವಿಕ, ರಾಜಸ, ತಾಮಸ ಈ ಮೂರು ಗುಣಗಳು ಮುಖ್ಯವಾಗಿವೆ. ಧಾರ್ಮಿಕ ಕೆಲಸ ಮಾತ್ರವಲ್ಲ ಎಲ್ಲ ಕೆಲಸಗಳಲ್ಲಿಯೂ ನಿಷ್ಠೆಯಿಂದ ಮಾಡುವುದು ಸಾತ್ವಿಕ ಕೆಲಸವಾಗಲಿದೆ. ಇದೇ ರೀತಿ ಕಾರ್ಯ ಸಿದ್ಧಿ ಪಡೆಯಬೇಕಾದರೆ ಯಾವುದೇ ಅಹಃ ಅಥವಾ ಇದು ನನ್ನಿಂದ ಮಾತ್ರ ಸಾಧ್ಯ ಎಂಬ ಭಾವನೆ ಇರಬಾರದು ಎಂದರು.

ಇದರ ಜತೆಗೆ ಧೃತಿ, ಧೈರ್ಯ, ನಂಬಿಕೆ, ಉತ್ಸಾಹ ಇವುಗಳೆಲ್ಲ ಇದ್ದರೆ ಯಾವುದೇ ಕೆಲಸವೂ ಸಲೀಸು, ಇದಕ್ಕೆ ಯಾವುದೇ ಅಡ್ಡಿ ಬಂದರೂ ಅದು ಸುಗಮವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಈಗ ಪರೀಕ್ಷೆ ಉತ್ತೀರ್ಣ ಆದರೂ ಅಲ್ಲಿಗೆ ಮುಗಿಯುವುದಿಲ್ಲ, ಒಂದು ವೇಳೆ ಫೇಲ್ ಆದರೂ ಅಲ್ಲಿಗೆ ಅದು ಕೂಡ ಮುಗಿಯುವುದಿಲ್ಲ. ಮತ್ತೆ ಓದಿಕೊಂಡು ಆಗದೇ ಇರುವುದನ್ನು ಸಾಧಿಸಬಹುದು. ಯಾವುದೇ ಲೋಪ ಸರಿ ಮಾಡಿಕೊಂಡರೆ ಜೀವನದಲ್ಲಿ ಮುಂದೆ ಹೋಗಬಹುದು. ಇದನ್ನು ಗೀತೆಯಲ್ಲಿ ಭಗವಂತ ಹೇಳಿದ್ದಾನೆ ಎಂದು ಪ್ರತಿಪಾದಿಸಿದರು.

ಶೋಭಾಯಾತ್ರೆ:
ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರ ವಿಜಯಯಾತ್ರೆ ಅಂಗವಾಗಿ ಭಾನುವಾರ ಸಂಜೆ ನಗರಕ್ಕೆ ಆಗಮಿಸಿದ ಶ್ರೀಗಳನ್ನು ಹೊಸೂರ ಬಿಆರ್ ಟಿಎಸ್ ಬಸ್ ನಿಲ್ದಾಣದಿಂದ ಪೂರ್ಣಕುಂಭದೊಂದಿಗೆ ಶೋಭಾಯಾತ್ರೆಯಲ್ಲಿ ಕರೆತರಲಾಯಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು.

ಸನ್ಮತಿ ಹಾಗೂ ವನಿತಾ ಶೆಟ್ಟಿ ಪ್ರಾರ್ಥನೆ ಹಾಡಿದರು. ಗಿರೀಶ ಹೆಬ್ಬಾರ ವೇದಘೋಷ ನೆರವೇರಿಸಿದರು. ತರುಣ, ಸಮೃದ್ಧಿ ಸಂಜನಾ, ಚೈತ್ರಾ ಸ್ವಾಗತ ಗೀತೆ ಹಾಡಿದರು. ಗುರುಸೇವಾ ಸಮಿತಿಯ ಗೋವಿಂದ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಪುಂಡಲಿಕ ಶೆಟ್ಟಿ ಅಭಿವಂದನೆ ಹಾಗೂ ಭಿನ್ನವತ್ತಳೆ ಓದಿದರು. ಸುಧೀರ, ಸತೀಶ, ಉಮೇಶ ಇತರರು ಗುರುವಂದನೆ ಸಲ್ಲಿಸಿದರು. ರಮ್ಯಾ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net