ಸನಾತನ ಧರ್ಮ ಅತ್ಯಂತ ಶ್ರೇಷ್ಠ

1NGD3
Published on

ಶೃಂಗೇರಿ ಶಂಕರ ಮಠದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ
ನಂಜನಗೂಡು :
ಸನಾತನ ಧರ್ಮದ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ಹೇಳಿಕೊಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ ಎಂದು ಶೃಂಗೇರಿ ಶಂಕರ ಮಠದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿರುವ ಶೃಂಗೇರಿ ಶಂಕರ ಶಾಖಾಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಅನೇಕ ಗಂಭೀರ ಪ್ರಶ್ನೆಗಳಿಗೂ ಉತ್ತರವನ್ನು ನಮ್ಮ ಸನಾತನ ಧರ್ಮದಲ್ಲಿ ಕಾಣಬಹುದಾಗಿದೆ. ಮಹರ್ಷಿಗಳು ಕಠೋರ ತಪಸ್ಸು ಮಾಡಿ ಈಶ್ವರನ ಅನುಗ್ರಹಕ್ಕೆ ಪಾತ್ರರಾಗಿ ವಿಷಯಗಳನ್ನು ತಿಳಿದು ನಮಗೆ ಉಪದೇಶ ಮಾಡಿದ್ದಾರೆ. ಸರ್ವ ಸಾರವನ್ನು ಒಳಗೊಂಡಿರುವ ಸನಾತನ ಧರ್ಮ ಅತ್ಯಂತ ಶ್ರೇಷ್ಠ ಧರ್ಮವಾಗಿದೆ. ಅದರಲ್ಲಿನ ಉಪದೇಶಗಳು ಪ್ರಾಮಾಣಿಕತೆಯಿಂದ ಕೂಡಿವೆ. ಆದರೆ, ಆಸ್ತಿಕರಾದ ನಾವು ಸನಾತನ ಧರ್ಮದ ಭವ್ಯತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ. ನಮ್ಮಲ್ಲಿರುವ ಬುದ್ಧಿ ಪರಿಪಕ್ವತೆ ಕೊರತೆಯಿಂದಾಗಿ ನಮಗೆ ಧರ್ಮದ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಅರ್ಧಂಬರ್ಧ ತಿಳಿದ ನಾಸ್ತಿಕರು ಸನಾತನ ಧರ್ಮದ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ಅವರ ಮಾತುಗಳಿಗೆ ಚಿಂತೆ ಮಾಡುವ ಅಗತ್ಯವಿಲ್ಲ. ನಾವು ದೃಢ ನಂಬಿಕೆಯಿಂದ ಧರ್ಮವನ್ನು ಅರಿತು ಮಕ್ಕಳಿಗೆ ಪರಿಪಾಲಿಸುವ ಜವಾಬ್ದಾರಿಯನ್ನು ತೋರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಮಹರ್ಷಿಗಳು ಸನಾತನ ಧರ್ಮವನ್ನು ಉದ್ಧಾರ ಮಾಡದಿದ್ದರೆ ನಾಡಿನಲ್ಲಿ ಪುಣ್ಯಕ್ಷೇತ್ರಗಳು ಕಾಣಲು ಸಿಗುತ್ತಿರಲಿಲ್ಲ. ಹಾಗೆಯೇ ಧಾರ್ಮಿಕ ಆಚರಣೆಗಳೂ ಉಳಿಯುತ್ತಿರಲಿಲ್ಲ. ನಾಸ್ತಿಕರು, ಆಸ್ತಿಕರು ಎಂದು ವಿಭಾಗ ಮಾಡಿ ಧರ್ಮ ನಾಶ ಮಾಡುವ ದುರುದ್ದೇಶ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಆಸ್ತಿಕರನ್ನು ಸರಿದಾರಿಯಲ್ಲಿ ನಡೆಸುವ ಕೆಲಸವನ್ನು ಮಹರ್ಷಿಗಳು ಮಾಡಿದ್ದಾರೆ ಎಂದರು.
ನಂಜನಗೂಡು ಮಠ ಜೀರ್ಣೋದ್ಧಾರ:
ನಂಜನಗೂಡಿಗೂ ಶೃಂಗೇರಿ ಶಂಕರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅನೇಕ ಸಂದರ್ಭಗಳಲ್ಲಿ ಜಗದ್ಗುರುಗಳು ಶ್ರೀಕಂಠೇಶ್ವರಸ್ವಾಮಿಗೆ ಪೂಜೆ ಸಲ್ಲಿಸಲು ಬಂದಿದ್ದಾರೆ. 92 ವರ್ಷಗಳ ಹಿಂದೆ ಶೃಂಗೇರಿಯ 34ನೇ ಪೀಠಾಧಿಪತಿಗಳಾಗಿದ್ದ ಚಂದ್ರಶೇಖರ ಭಾರತಿ ಸ್ವಾಮೀಜಿ ಅವರು ನಂಜನಗೂಡಿನಲ್ಲಿ ಶೃಂಗೇರಿ ಶಂಕರ ಶಾಖಾ ಮಠವನ್ನು ಸ್ಥಾಪಿಸಿದ್ದರು. ಅದೀಗ ಶಿಥಿಲಾವಸ್ಥೆಯಲ್ಲಿರುವುದರಿಂದ ಹಲವು ವರ್ಷಗಳ ಕಾಲ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಶಾಖಾ ಮಠದವನ್ನು ಮುಂದಿನ ವರ್ಷದಲ್ಲಿ ಜೀರ್ಣೋದ್ದಾರ ಮಾಡಲಾಗುವುದು. ಶತಮಾನೋತ್ಸವದ ಹೊತ್ತಿಗೆ ಲೋಕಾರ್ಪಣೆ ಮಾಡುವ ಸಂಕಲ್ಪ ಮಾಡಿರುವುದಾಗಿ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಇದಕ್ಕೂ ಮೊದಲು ನಾರಾಯಣರಾವ್ ಅಗ್ರಹಾರದಲ್ಲಿ ಜೀರ್ಣೋದ್ದಾರಗೊಂಡಿರುವ ಗಣಪತಿ ದೇವಾಲಯದಲ್ಲಿ ವಿಧುಶೇಖರ ಭಾರತೀ ಸ್ವಾಮೀಜಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಉದ್ಘಾಟಿಸಿದರು. ಶ್ರೀಕಂಠೇಶ್ವರಸ್ವಾಮಿ ದೇವಾಲಯ ಹಾಗೂ ಗಟ್ಟವಾಡಿಯಲ್ಲಿರುವ ಸುಬ್ರಹ್ಮಣೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಗೋವರ್ಧನ್, ಪ್ರಥಮದರ್ಜೆ ಗುತ್ತಿಗೆದಾರ ಯು.ಎನ್.ಪದ್ಮನಾಭರಾವ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಎಂ.ಎನ್.ಮೋಹನ್‌ಕುಮಾರ್, ಎನ್.ಎಸ್.ಸುಬ್ರಹ್ಮಣ್ಯ, ಉಮೇಶ್ ಶರ್ಮ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net