

ಶೃಂಗೇರಿ: ತಾಲೂಕಿನಲ್ಲಿ ಎಡೆಬಿಡದೆ ಸುರಿದ ಮಳೆ ಬುಧವಾರ ಸ್ವಲ್ಪ ಕ್ಷೀಣಿಸಿದೆ. ಆದರೆ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಅಲ್ಲಲ್ಲಿ ಧರೆ ಕುಸಿತ, ರಸ್ತೆ ಕುಸಿದು ಗ್ರಾಮೀಣ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಪಟ್ಟಣದ ದರ್ಗಾದ ಬಳಿ ಸುಮಾರು 50 ಅಡಿಯಷ್ಟು ಎತ್ತರದಿಂದ ಮಣ್ಣು ಕುಸಿಯುತ್ತಿದ್ದು, ದರ್ಗಾವೇ ಕುಸಿಯುವ ಸ್ಥಿತಿಯಲ್ಲಿದೆ.
ನೆಮ್ಮಾರ್ ಗ್ರಾಪಂ ವ್ಯಾಪ್ತಿಯಲ್ಲಿ ನೆಮ್ಮಾರ್‌ನಿಂದ ಬುಕುಡಿಬೈಲು, ಹರೂರುಮಕ್ಕಿ, ವಳಲೆಮಾವಿನಕಾಡು ಮುಂತಾದ ಕಡೆ ಸಂಪರ್ಕ ಸಾಧಿಸುವ ಕಡೆ ಸುಮಾರು 30 ಅಡಿ ರಸ್ತೆ ಕುಸಿದಿದೆ. ಇನ್ನೂ ಹೆಚ್ಚು ಮಳೆಯಾದಲ್ಲಿ ಸುಮಾರು 500 ಕುಟುಂಬದವರ ಸ್ಥಿತಿ ಅಯೋಮಯವಾಗಲಿದೆ ಎಂದು ಗ್ರಾಮದ ಶಿವಪ್ರಸಾದ್ ಹೇಳಿದ್ದಾರೆ.
ದರ್ಗಾ ರಕ್ಷಿಸುವಂತೆ ಮುಸ್ಲಿಂ ಸಮುದಾಯದವರು ತಾಲೂಕು ಕಚೇರಿ ಎದುರು ಪ್ರತಿಭಟನೆ ಕೂಡಾ ಮಾಡಿದರು. ಪಪಂ ಸದಸ್ಯ ರಫೀಕ್ ಅಹಮದ್ ಮಾತನಾಡಿ, ದರ್ಗಾ ಮಳೆಯಿಂದ ಕುಸಿಯುವ ಸಾಧ್ಯತೆ ಇದೆ. ಈ ಕುರಿತು ಸುಮಾರು 15 ವರ್ಷಗಳಿಂದ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶಾಸಕ ಟಿ.ಡಿ.ರಾಜೇಗೌಡ ಅವರು ದರ್ಗಾದ ಕುರಿತು ಅಂದಾಜುಪಟ್ಟಿ ಮಾಡಿಸಿದ್ದು ಕೂಡಲೇ ಅನುದಾನ ಬಿಡುಗಡೆಮಾಡಬೇಕು ಎಂದು ಮನವಿ ಮಾಡಿದರು.
ಭಾರಿ ಮಳೆಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳು ಹೊಂಡಮಯವಾಗಿವೆ. ಕಿಕ್ರೆ, ಹೊಳೆಹದ್ದು ಸೇತುವೆಗಳು ಕುಸಿದಿವೆ. ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಹಲವಾರು ಕಡೆ ಧರೆಗಳು ಕುಸಿಯುತ್ತಿವೆ.