

ಮಡಿಕೇರಿ:
ಪೊನ್ನಂಪೇಟೆ ತಾಲೂಕು ಶ್ರೀಮಂಗಲದ ಜೆ.ಸಿ. ವಿದ್ಯಾ ಸಂಸ್ಥೆಯ 35 ನೇ ವಾರ್ಷಿಕೋತ್ಸವ ಸೋಮವಾರ ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೊಟ್ರಂಗಡ ಸುಬ್ರಹ್ಮಣಿ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಕಳೆದ 35 ವರ್ಷಗಳಿಂದ ಈ ಗ್ರಾಮದಲ್ಲಿ ವಿದ್ಯೆ ಧಾರೆ ಎರೆಯುತ್ತಿರವ ಬಗ್ಗೆ ಹೆಮ್ಮೆ ಇದೆ. ಇದಕ್ಕೆ ಸಹಕರಿಸಿದ ಪೋಷಕರು ಅಭಿನಂದನಾರ್ಹರು. ಪ್ರತಿ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ತಂದು ಕೊಡುವುದಲ್ಲದೆ ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮಾಂತರ ಶಾಲೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತಂದು ಕೊಟ್ಟಿದ್ದು ಸಂಸ್ಥೆಯ ಸಾಧನೆಯಾಗಿದೆ. ಇದಕ್ಕೆ ಶಿಕ್ಷಕರ ಶ್ರಮವೇ ಕಾರಣ ಎಂದರು.
ಸಂಸ್ಥೆಯ ಸಂಚಾಲಕ ಮಚ್ಚಮಾಡ ಸುರೇಶ್ ಮಾತನಾಡಿ ಈ ವಿದ್ಯಾ ಸಂಸ್ಥೆಯಲ್ಲಿ ವಿದ್ಯೆಯನ್ನು ಪಡೆದುಕೊಂಡAತಹ ವಿದ್ಯಾರ್ಥಿಗಳು ಈಗ ಡಾಕ್ಟರ್ ಗಳಾಗಿರುವುದು, ಇಂಜಿನಿಯರ್‌ಗಳಾಗಿರುವುದು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು, ದೇಶ ಹಾಗು ವಿದೇಶಗಳ ಕ್ರೀಡೆಯಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಶಾಲೆಯ ಆಡಳಿತ ಅಧಿಕಾರಿ ಕೊಟ್ರಂಗದ ತಿಮ್ಮಯ್ಯ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಂಸ್ಥೆ ಸದಾ ಸಿದ್ಧ ಎಂದು ಹೇಳಿದರಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಚರಣ್‌ನನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಕನ್ನಡದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಸಹ ಶಿಕ್ಷಕ ಪ್ರಸನ್ನ ಬಹುಮಾನ ವಿತರಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ್ ಎನ್., ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಂಧು, ಪ್ರೌಢಶಾಲೆಯ ಸಹಶಿಕ್ಷಕರಾದ ಬಿಂದುಸಾರ, ಚಂಚಲ ಮತ್ತಿತರರು ಇದ್ದರು.