

ವಿಜಯಪುರ: ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಮನದ ಕನ್ನಡಿಯ ಮೇಲೆ ಧೂಳು ಮುಸುಕಿದೆ. ಅಂಟಿದ ಧೂಳು ಸ್ವಚ್ಛಗೊಳಿಸಲು ಮಾರ್ಗದರ್ಶಕರು ಮುಖ್ಯ. ಜೀವನದ ಉನ್ನತಿ ಮತ್ತು ಶ್ರೇಯಸ್ಸಿಗೆ ಪರಿಶ್ರಮ ಸಾಧನೆ ಬಹಳ ಮುಖ್ಯವೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
ತಾಲೂಕಿನ ನಾಗಠಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿರೇಮಠದ ಉದಯಲಿಂಗೇಶ್ವರ ಶಿವಯೋಗಿಗಳ ನೂತನ ಶಿಲಾ ಮಂಟಪ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದೇವರು ಅನ್ನ, ನೀರು, ಗಾಳಿ, ಬೆಳಕು, ಹಣ್ಣು- ಹೂ ತುಂಬಿ ಹರಿಯುವ ನದಿಗಳನ್ನು ಮನುಷ್ಯನ ಸಂತೋಷಕ್ಕಾಗಿ ನೀಡಿದ್ದಾನೆ. ಆದರೆ ಮನುಷ್ಯ ಆಸ್ತಿ ಅಂತಸ್ತು ಅಧಿಕಾರದ ಬೆನ್ನು ಹತ್ತಿ ನಿಜವಾದುದನ್ನು ಮರೆತು ಸಂಕಷ್ಟಕ್ಕೆ ಒಳಗಾಗಿದ್ದಾನೆ. ಬಹಳಷ್ಟು ಜನ ಜಗತ್ತೇ ಬದಲಾಗಿದೆ ಎಂದು ಹೇಳುತ್ತಾರೆ. ಮೆಣಸಿನ ಖಾರ ಬದಲಾಗಿಲ್ಲ, ಮಾವಿನ ಹಣ್ಣಿನ ಸಿಹಿ ಬದಲಾಗಿಲ್ಲ, ಎಲೆಗಳ ಹಸಿರು ಬಣ್ಣ ಬದಲಾಗಿಲ್ಲ. ಆದರೆ ಮನುಷ್ಯನ ಸ್ವಭಾವ ಮಾತ್ರ ಬದಲಾಗಿದೆ ಎಂಬುದನ್ನು ಮರೆಯಬಾರದು ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಹಿಂದು ಸಂಸ್ಕೃತಿ ವಿಶಾಲ ಮನೋಭಾವನೆಗಳನ್ನು ಒಳಗೊಂಡಿದೆ. ವೀರಶೈವ ಲಿಂಗಾಯತ ಹಿಂದು ಧರ್ಮದ ಅಂಗ. ಈ ಧರ್ಮದ ಮೂಲ ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳಾಗಲಿ 12ನೇ ಶತಮಾನದ ಬಸವಾದಿ ಶಿವಶರಣರ ವಿಚಾರ ಧಾರೆಗಳು ಒಂದೇ ಆಗಿವೆ ಹೊರತು ಬೇರೆ ಬೇರೆ ಅಲ್ಲ. ಕೆಲವರು ಇವರೀರ್ವರ ಮಧ್ಯೆ ಕಂದಕ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಕೂಡಲೇ ನಿಲ್ಲಿಸಿ ಮೂಲ ಸಂಸ್ಕೃತಿ ಪರಂಪರೆ ಬೆಳೆಸುವ ನಿಟ್ಟಿನಲ್ಲಿ ಗಮನಿಸುವ ಅವಶ್ಯಕತೆ ಇದೆ ಎಂದರು.
ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬಯಕೆ ಸಿದ್ಧಿಯ ಕಡೆಗೆ ಸಾಗುವ ಶಕ್ತಿ ನೀಡುತ್ತದೆ. ಬಯಕೆ ಇಲ್ಲದಿದ್ದರೆ ಸಾಧನೆಯೂ ಇಲ್ಲ. ಸಿದ್ಧಿಯೂ ಇಲ್ಲ. ಬಯಕೆ ಒಳ್ಳೆಯದಾದರೆ ಬದುಕು ಒಳ್ಳೆಯದಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯರು, ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಾಂತವೀರ ಶಿವಾಚಾರ್ಯರು, ಬೊಮ್ಮನಹಳ್ಳಿ ಗವಿಮಠದ ಗುರುಶಾಂತ ಶಿವಾಚಾರ್ಯರು, ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು.
ಯುವ ನೇತಾರ ಚಿದಾನಂದ ಸವದಿ ಸಮಾರಂಭ ಉದ್ಘಾಟಿಸಿದರು. ಈ ಪವಿತ್ರ ಸಮಾರಂಭದಲ್ಲಿ ಸದಾಶಿವ ಚಿಕ್ಕರೆಡ್ಡಿ, ನವೀನ ಅರಕೇರಿ, ಚಂದ್ರಶೇಖರ ಅರಕೇರಿ, ಪ್ರಕಾಶ ಲೋಣಿ, ಅಶೋಕ ಕತ್ನಳ್ಳಿ, ಸಿದ್ಧನಗೌಡ ಪಾಟೀಲ, ರಾವುತಪ್ಪ ಬಿಜ್ಜರಗಿ ಮತ್ತಿತರರಿದ್ದರು.
ಸಂತೋಷ ಬಂಡೆ, ಸುರೇಶ ಹೂಗಾರ, ಬಾಬು ಕೋಲಾರ ಕಾರ್ಯಕ್ರಮ ನಿರ್ವಹಿಸಿದರು.