ಶ್ರೀಮದ್ಭಾಗವತ ಸನಾತನ ಧರ್ಮದ ಅವಿಭಾಜ್ಯ ಅಂಗ

VEENA B
Published on

ಸಿದ್ದಾಪುರ: ಸನಾತನ ಅಂದರೆ ಅಳಿಯದೇ ಉಳಿಯುವುದು. ಸಕಲ ಸಂಗತಿಗಳಿಂದ ಪರಮ ಸತ್ಯವನ್ನು ಕಂಡುಕೊಂಡದ್ದು. ಸನಾತನ ಧರ್ಮದ ಅವಿಭಾಜ್ಯ ಅಂಗ ಶ್ರೀಮದ್ಭಾಗವತ ಎಂದು ಶ್ರೇಷ್ಠ ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ ಹೇಳಿದರು.

ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಸಂಸ್ಕೃತಿ ಸಂಪದ, ಸಾಕೇತ ಪ್ರತಿಷ್ಠಾನ ಗುಂಜಗೋಡು ಹಾಗೂ ಸುಷಿರ ಸಂಗೀತ ಪರಿವಾರದ ಸಹಕಾರದೊಂದಿಗೆ ಆಯೋಜಿಸಿರುವ 7 ದಿನಗಳ ಶ್ರೀಮದ್ಭಾಗವತ ಸಪ್ತಾಹದ ಮೊದಲ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಜ್ಞಾನ ಎನ್ನುವುದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತಲುಪಬೇಕು. ಇಲ್ಲವಾದರೆ ಅದು ಜ್ಞಾನ ಅಲ್ಲ. ಮತ್ತು ಕಾಲದಿಂದ ಕಾಲಕ್ಕೆ ಅದು ಸರಳವಾಗಬೇಕು ಎನ್ನುವುದನ್ನು ನನ್ನ ಗುರುಗಳು ತಿಳಿಸಿದ್ದರು. ಈಗಿನ ಸಂದರ್ಭದಲ್ಲಿ ಜಾತಿ, ಮತ, ಅಂತಸ್ತು, ಲಿಂಗ ಎಲ್ಲರೂ ಅರಿತುಕೊಳ್ಳಬೇಕಾದದ್ದು ಶ್ರೀಮದ್ಭಾಗವತವನ್ನು. ಇದು ಕಥೆಗಳಿಗಿಂತ ಮುಖ್ಯವಾಗಿ ಮೌಲ್ಯವನ್ನು ತೋರಿಸುತ್ತದೆ. ವಿಸ್ಮತಿಗೆ ಸರಿದಿರುವ ಭಗವಂತನನ್ನು ತಲುಪುವ ನಮ್ಮ ಒಳಗಿನ ಜ್ಞಾನ, ವೈರಾಗ್ಯ ಭಕ್ತಿಗಳನ್ನು ಎಚ್ಚರಿಸುವ ಶಕ್ತಿ ಭಾಗವತದಲ್ಲಿದೆ ಎಂದು ಹಲವು ನಿದರ್ಶನಗಳ ಮೂಲಕ ಅವರು ವಿವರಿಸಿದರು.

ಸಾಕೇತ ಪ್ರತಿಷ್ಠಾನದ ವಿ. ಶೇಷಗಿರಿ ಭಟ್ಟ ಗುಂಜಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ಸ್ವಾಗತಿಸಿದರು. ಸುಧೀರ ಬೆಂಗ್ರೆ ಶ್ರೀಕೃಷ್ಣನ ಕುರಿತಾದ ಹಾಡು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net