ಶಿರಗೋಡಿನಲ್ಲಿ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ಅದ್ದೂರಿ ರಥೋತ್ಸವ

23 HANUR 1
Published on

ಹನೂರು: ಸಮೀಪದ ಶಿರಗೋಡು ಗ್ರಾಮದ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿಯ 17ನೇ ವರ್ಷದ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.


ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪ, ತಳಿರು ತೋರಣ ಹಾಗೂ ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ದೇಗುಲದಲ್ಲಿ ಸ್ವಾಮಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ತೇರಿಗೆ ಅಳವಡಿಸುವ ಕಳಶಕ್ಕೆ ಪೂಜೆ ನೆರವೇರಿಸಲಾಯಿತು.


ಸ್ವಾಮಿಯ ಮೂರ್ತಿಯನ್ನು ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ವಾದ್ಯಮೇಳದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ತೇರಿಗೆ ಕಳಶ ಅಳವಡಿಸಲಾಯಿತು. ಉತ್ಸವ ಮೂರ್ತಿಯನ್ನು ಬಣ್ಣ ಬಣ್ಣದ ಬಟ್ಟೆ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ತೇರಿನಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು.


ಗರುಡವೊಂದು ಪ್ರದಕ್ಷಿಣೆ ಹಾಕಿದ ನಂತರ ಮಧ್ಯಾಹ್ನ 1.1 ನಿಮಿಷಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.


ಈ ವೇಳೆ ಭಕ್ತರು ಗೋವಿಂದ ಗೋವಿಂದಾ… ಜಯಘೋಷಗಳನ್ನು ಮೊಳಗಿಸುವುದರ ಮೂಲಕ ಉತ್ಸಾಹದಿಂದ ತೇರನ್ನು ಎಳೆದು ಭಕ್ತಿ ಮೆರೆದರು.
ಹಣ್ಣು, ದವನ ಎಸೆದ ಭಕ್ತರು: ರಥೋತ್ಸವದ ವೇಳೆ ಹರಕೆ ಹೊತ್ತ ಭಕ್ತರು ತೇರಿಗೆ ಹಣ್ಣು ದವನ ಎಸೆದು ಪುನೀತರಾದರು.
ಹನೂರು ಸೇರಿದಂತೆ ಮಂಗಲ, ಚನ್ನಾಲಿಂಗನಹಳ್ಳಿ, ಉದ್ದನೂರು, ಬೆಳತ್ತೂರು, ಲೊಕ್ಕನಹಳ್ಳಿ, ಅಜ್ಜೀಪುರ, ರಾಮಾಪುರ ಹಾಗೂ ಈ ಭಾಗದ ಇನ್ನಿತರ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.


ರಥೋತ್ಸವದ ಬಳಿಕ ಭಕ್ತರು ಸಾಲಿನಲ್ಲಿ ದೇಗುಲಕ್ಕೆ ತೆರಳಿ ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ದೇಗುಲದ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು. ಮಜ್ಜಿಗೆ, ಪಾನಕ ವಿತರಿಸಲಾಯಿತು. ಹನೂರು ಪೊಲೀಸ್ ಠಾಣೆಯ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net