

ಮಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಸ್ವಾಭಿಮಾನಿ ವೇದಿಕೆ ನೇತೃತ್ವದಲ್ಲಿ ಭಕ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾವಣೆಗೊಂಡ ಮಹಿಳೆಯರು ಸೇರಿದಂತೆ ನೂರಾರು ಭಕ್ತರು, ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ ಮೆರವಣಿಗೆಯಲ್ಲಿ ತೆರಳಿ ಮಾನವ ಸರಪಳಿ ನಿರ್ಮಿಸಿದರು. ನಂತರ ರಸ್ತೆ ಸಂಚಾರ ತಡೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ನಂತರ ಡಿಸಿ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೆಲ ಕಿಡಿಗೇಡಿಗಳು ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಯಾರೋ ಒಬ್ಬ ಅನಾಮಿಕ ತಾನು ನೂರಾರು ಶವ ಹೂತು ಹಾಕಿದ್ದೇನೆ ಎಂದು ಹೇಳಿದ್ದನ್ನೇ ನಂಬಿ ಸರ್ಕಾರ ಶೋಧ ನಡೆಸುತ್ತಿದೆ. ಎಸ್‌ಐಟಿ ತನಿಖಾ ತಂಡ ರಚಿಸಿರುವುದು ಒಳ್ಳೆಯ ಬೆಳವಣಿಗೆ. ಅನಾಮಿಕ ವ್ಯಕ್ತಿ ತೋರಿಸಿದ 16 ಸ್ಥಳದಲ್ಲೂ ಯಾವುದೇ ಶವಗಳಾಗಲಿ, ಅವುಗಳ ಅಸ್ಥಿಪಂಜರವಾಗಲಿ ಸಿಕ್ಕಿಲ್ಲ. ಇದು ಅನ್ಯಧರ್ಮೀಯರು ಹಿಂದು ಧರ್ಮದ ಹೂಡಿರುವ ಕುತಂತ್ರವಾಗಿದ್ದು, ಹಿಂದು ಧರ್ಮದ ವಿರುದ್ಧ ಅಪಪ್ರಚಾರ ಮಾಡಲೆಂದೇ ಅನಾಮಿಕ ವ್ಯಕ್ತಿಯನ್ನು ಸೃಷ್ಟಿಸಲಾಗಿದೆ. ಅಲ್ಲದೆ, ಯೂಟ್ಯೂಬರ್ ಒರ್ವ ಧರ್ಮಸ್ಥಳ, ಧರ್ಮಾಧಿಕಾರಿ ಮತ್ತು ಕುಟುಂಬದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾನೆ. ಈತನಿಗೆ ಎಲ್ಲಿಂದ ಹಣ ಬರುತ್ತದೆ ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು. ಅಲ್ಲದೆ, ಅನಾಮಿಕ ಮುಸುಕುಧಾರಿ ವ್ಯಕ್ತಿಯನ್ನು ಮೊದಲು ತನಿಖೆಗೊಳಪಡಿಸಿ ಸತ್ಯಾಸತ್ಯತೆ ತಿಳಿಯಬೇಕೆಂದು ಆಗ್ರಹಿಸಿದರು.
ಭಾರತದ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಧರ್ಮಸ್ಥಳವು ಒಂದು. ಸರಿ ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರ ‘ದಕ್ಷಿಣ ಕಾಶಿ’ ಎಂದೇ ನಾಮಾಂಕಿತವಾಗಿದೆ. ರಾಜ್ಯದಲ್ಲಷ್ಟೇ ಅಲ್ಲದೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹೀಗೆ ದೇಶದ ಬೇರೆ ಬೇರೆ ಕಡೆಗಳಿಂದ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಪ್ರತಿನಿತ್ಯ ಸುಮಾರು 50 ಸಾವಿರದಿಂದ 1 ಲಕ್ಷ ಜನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇದನ್ನು ಸಹಿಸದ ಅನ್ಯಧರ್ಮಿಯರು ಪವಿತ್ರ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿ ಭಕ್ತರಲ್ಲಿ ಅಪನಂಬಿಕೆ ಬರುವಂತೆ ಮಾಡುತ್ತಿದ್ದಾರೆ. ಮೊದಲು ಇಂತಹವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಳೆದ ಕೆಲ ವರ್ಷಗಳಿಂದ ಹಲವರು ಸೇರಿಕೊಂಡು ಮಂಜುನಾಥಸ್ವಾಮಿ ದೇವಾಲಯ ಹಾಗೂ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ಹೆಸರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ವಿಡಿಯೋಗಳ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಿಕೊಂಡು ಯಾವುದೇ ದಾಖಲೆಗಳಿಲ್ಲದೆ ನಿರಂತರವಾಗಿ ಸುಳ್ಳು ಮಾಹಿತಿ ಪ್ರಚಾರ ಮಾಡುತ್ತಿರುವುದರಿಂದ ಕ್ಷೇತ್ರದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇದರಿಂದಾಗಿ ಈಗಾಗಲೇ ಸಮಾಜದಲ್ಲಿ ಎರಡು ಬಣಗಳು ನಿರ್ಮಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯು ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿಭಂಗಕ್ಕೆ ಕಾರಣವಾಗಬಹುದಾಗಿದೆ ಎಂದು ಎಚ್ಚರಿಕೆ ನೀಡಿದರು.
ಅನಾಮಿಕ ವ್ಯಕ್ತಿಯೋರ್ವ ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರವು ‘ವಿಶೇಷ ತನಿಖಾ ತಂಡ’ವನ್ನು ರಚಿಸಿ ತನಿಖೆ ನಡೆಸುತ್ತಿರುವುದನ್ನು ಶ್ರೀ ಕ್ಷೇತ್ರದ ಭಕ್ತವೃಂದದವರಾದ ನಾವೆಲ್ಲರೂ ಗೌರವದಿಂದ ಸ್ವಾಗತಿಸುತ್ತೇವೆ. ಆದರೆ, ಇದೀಗ ಅನಾಮಿಕ ದೂರುದಾರನನ್ನು ಬಳಸಿಕೊಂಡು ಶ್ರೀ ಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ತಮ್ಮ ಯೂಟ್ಯೂಬ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಮಾಹಿತಿಗಳನ್ನು ಭಿತ್ತರಿಸಿ ಭಕ್ತರಲ್ಲಿ ಗೊಂದಲವನ್ನು ನಿರ್ಮಿಸುತ್ತಿದ್ದಾರೆ. ಸೌಜನ್ಯಾಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ದಾಳಿಗೆ ಹೊರಟವರ ಷಡ್ಯಂತ್ರ ಹಾಗೂ ಆಪಪ್ರಚಾರ ಮಾಡುತ್ತಿರುವುದರ ಹಿನ್ನೆಲೆ ಏನು?. ಸುಳ್ಳು ಆರೋಪ ಮಾಡಲು ಪ್ರಚೋದಿಸುತ್ತಿರುವವರು ಯಾರು?. ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ ಎಂಬುದನ್ನು ತಿಳಿಯಲು ಸೂಕ್ತ ತನಿಖೆ ನಡೆಸಬೇಕಾಗಿದೆ. ತಮ್ಮ ಮೊಬೈಲ್‌ನಲ್ಲಿ ಸಾಕ್ಷಿಗಳಿವೆ ಎಂದು ವೇದಿಕೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಘಂಟಾಘೋಷವಾಗಿ ಭಾಷಣ ಮಾಡುತ್ತಿರುವವರನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈಗಿರುವ ಎಸ್‌ಐಟಿ ತಂಡ ಅಥವಾ ಇನ್ನೊಂದು ತಂಡವನ್ನು ರಚಿಸಿ ತಕ್ಷಣ ತನಿಖೆಯನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷ ನಾಗಮಂಗಲ ಹನುಮಂತು, ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಕಾರಸವಾಡಿ ಮಹದೇವ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ, ಕಲ್ಲಹಳ್ಳಿ ಆನಂದ, ಹೊಸಹಳ್ಳಿ ಶಿವು ಸೇರಿದಂತೆ ಹಲವರು ಭಾಗವಹಿಸಿದ್ದರು.