

ಮೈಸೂರು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಮೇಯರ್ ಶಿವಕುಮಾರ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಮೈಸೂರು ತಾಲೂಕು ಮಂಡಿಮೊಹಲ್ಲ ವಲಯ ವತಿಯಿಂದ ನಜರ್‌ಬಾದ್‌ನ ರಾಜಗೋಪಾಲ್‌ರಾವ್ ರಾಶಿಂಕರ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಧನಾ ಸಮಾವೇಶ ಹಾಗೂ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕು ಎಂಬ ಉದ್ದೇಶದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ದುಡಿಯುತ್ತಿದೆ. ವೀರೇಂದ್ರ ಹೆಗ್ಗಡೆ ಅವರು ಸರ್ಕಾರಕ್ಕಿಂತ ಹೆಚ್ಚಿನ ರೀತಿಯಲ್ಲಿ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಕಾಣಿಕೆ ನೀಡಿದ್ದಾರೆ. ಧರ್ಮಸ್ಥಳ ಸಂಘಗಳು ಇಡೀ ದೇಶದಲ್ಲೇ ಮಾದರಿಯಾಗಿವೆ. ನಂಬಿಕೆಗೆ ಅರ್ಹ ಸಂಘಗಳಾಗಿವೆ ಎಂದರು.
ವೀರೇಂದ್ರ ಹೆಗ್ಗಡೆ ಅವರು ಧಾರ್ಮಿಕ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಸನಾತನ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸನಾತನ ಧರ್ಮವನ್ನು ಉಳಿಸಿಕೊಳ್ಳಲು ಶ್ರೀ ಮುಂಜುನಾಥ ಸ್ವಾಮಿಯ ಆಶೀರ್ವಾದ ಇದೆ ಎಂದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಎಲ್ಲವನ್ನೂ ನಿಭಾಯಿಸಲು ಮತ್ತು ಎದುರಿಸಲು ಸಾಧ್ಯವಾಗುತ್ತದೆ. ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳವ ಜತೆಗೆ ಎಲ್ಲ ರಂಗದಲ್ಲೂ ಮುಂದೆ ಬರಬೇಕು ಎಂದರು.
ಗುಡಿ ಕೈಗಾರಿಕೆ, ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಮಹಿಳೆಯರು ಮುನ್ನಡೆಸುತ್ತಿರುವುದನ್ನು ನೋಡುತ್ತಿದ್ದೇವೆ. ಜತೆಗೆ, ಮಹಿಳೆಯರು ಆಟೋದಿಂದ ಹಿಡಿದು ವಿಮಾನ ಚಾಲನೆವರೆಗೂ ತೊಡಗಿಸಿಕೊಂಡಿರುವುದನ್ನು ನೋಡುತ್ತಿದ್ದೇವೆ. ಗಗನಯಾನವನ್ನೂ ಮಾಡುತ್ತಿದ್ದಾರೆ. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂದರು.
ಮಹಿಳೆಯರು ರಾಜಕೀಯ ಕ್ಷೇತ್ರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ದೇಶವನ್ನು ಆಳಲು ಮಾತೆಯರ ಪಾತ್ರವೂ ಇರಬೇಕು. ಈಗ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳ ಜತೆಗೆ ವಿಧಾನಸಭೆಯಲ್ಲೂ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಜಾರಿಯಾಗಬೇಕು. ವಿಧಾನಸೌಧದಲ್ಲೂ ಅರ್ಧದಷ್ಟು ಮಹಿಳೆಯರು ಇರಬೇಕು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷ ಗೌರವ ನೀಡಲಾಗುತ್ತಿದೆ. ಪುರುಷರಷ್ಟೇ ಮಹಿಳೆಯರಿಗೂ ಎಲ್ಲ ರೀತಿಯ ಸ್ಥಾನಮಾನವನ್ನು ನೀಡಲಾಗಿದೆ. ಮಹಿಳೆಯರ ಅಭಿವೃದ್ಧಿಗೆ ಸರ್ಕಾರದ ಜತೆಗೆ ಇಂತಹ ಸಂಸ್ಥೆಗಳು ದುಡಿಯುತ್ತಿರುವುದನ್ನು ಎಲ್ಲರೂ ನೆನೆಯಬೇಕು ಎಂದರು.
ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ನಗರ ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಛಾಯಾದೇವಿ, ಕಲ್ಯಾಣ ಮಂಟಪದ ವ್ಯವಸ್ಥಾಪಕ ಆರ್.ಮೋಹನ್, ಟ್ರಸ್ಟ್ ನಿರ್ದೇಶಕ ಲಕ್ಷ್ಮಣ್, ನಗರ ಪಾಲಿಕೆ ಮಾಜಿ ಸದಸ್ಯ ಕುಶಲ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ.ಹಂದಹಳ್ಳಿ ಸೋಮಶೇಖರ್ ಇತರರಿದ್ದರು.