

ದೇವದುರ್ಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲು ಮುಂದಾಗಿದೆ. ಅದರಂತೆ ತಾಲೂಕಿನ ಶೈಕ್ಷಣಿಕ ಸುಧಾರಣೆಗೆ ಸಹಕಾರ ನೀಡಲಿದೆ ಎಂದು ಯೋಜನಾಧಿಕಾರಿ ರಾಜೇಶ ಎಂ.ಕಾನರ್ಪ ಹೇಳಿದರು.
ತಾಲೂಕಿನ ಗಲಗ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಟ್ಯೂಶನ್ ಕ್ಲಾಸ್ ತರಬೇತಿ ಉದ್ಘಾಟಿಸಿ ಗುರುವಾರ ಮಾತನಾಡಿದರು. ಶೈಕ್ಷಣಿಕ ಕ್ಷೇತ್ರ ಸುಧಾರಣೆಗಾಗಿ ಈ ಹಿಂದೆ ಜ್ಞಾನ ವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕರ ಸೇವೆ ಒದಗಿಸಲಾಗಿತ್ತು. ಅಲ್ಲದೆ ಆಯ್ದ ಹಿಂದುಳಿದ ಗ್ರಾಮೀಣ ಭಾಗದ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಟ್ಯೂಶನ್ ಕ್ಲಾಸ್ ಮೂರು ತಿಂಗಳವರೆಗೆ ನೀಡಲಾಗಿತ್ತು ಎಂದರು.
ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಸಲಹೆಯಂತೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಮಧ್ಯ ವರ್ಜನ ಶಿಬಿರ, ಶೈಕ್ಷಣಿಕ ಕ್ಷೇತ್ರ ಸುಧಾರಣೆಗೆ ಸಲಕರಣೆ ವಿತರಣೆ, ಆರೋಗ್ಯ ಜಾಗೃತಿ, ಅಂತರ್ಜಲ ವೃದ್ಧಿಗೆ ವಿವಿಧ ಯೋಜನೆ, ಮಹಿಳೆಯರಿಗೆ ಸ್ವ ಸಹಾಯ ಸಂಘದ ಮೂಲಕ ಸಾಲ ಸೌಲಭ್ಯ ಸೇರಿ ಹತ್ತಾರು ಸಮಾಜಮುಖಿ ಕೆಲಸ ಮಾಡಲಾಗಿದೆ ಎಂದರು.
ಮುಖ್ಯಶಿಕ್ಷಕ ಬಸವರಾಜ ಕಟ್ಟಿಮನಿ, ವಲಯ ಮೇಲ್ವಿಚಾರಕ ಮಂಜುನಾಥ, ಗ್ರಾಮಸ್ಥರಾದ ಶಿವಕುಮಾರ, ಚನ್ನಬಸವ, ನಾಗಪ್ಪ ಇತರರಿದ್ದರು.