ಶ್ರೀ ಕೃಷ್ಣ ಜನ್ಮಾಷ್ಟಮಿ ಮೂಡೆ, ಹೂವು ಮಾರಾಟ ಭರಾಟೆ ಜೋರು

mng-sep5-market3
Published on

ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲು ನಾಡು ಸನ್ನದ್ಧಗೊಂಡಿದೆ. ಮುನ್ನಾ ದಿನ ಮಾರುಕಟ್ಟೆಗಳಲ್ಲಿ ಗ್ರಾಹರಕರ ಮೂಡೆ, ಹೂವು, ತರಕಾರಿ ಖರೀದಿ ಭರಾಟೆ ಜೋರಾಗಿತ್ತು. ಸುಳ್ಯ, ಪುತ್ತೂರು, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ಪೇಟೆಗೆ ಆಗಮಿಸಿ ಗ್ರಾಹಕರು ಅಷ್ಟಮಿ ಆಚರಣೆಗೆ ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು.


ಮಂಗಳೂರಿನ ಸ್ಟೇಟ್‌ಬ್ಯಾಂಕ್, ಕಾರ್‌ಸ್ಟ್ರೀಟ್ ಪರಿಸರದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು. ಸ್ಥಳೀಯ ಹಾಗೂ ಇತರ ಜಿಲ್ಲೆಗಳಿಂದ ಬಂದ ವ್ಯಾಪಾರಸ್ಥರು ಹೂವು, ತರಕಾರಿ ಮಾರಾಟದಲ್ಲಿ ತೊಡಗಿದ್ದರು. ಸ್ಥಳೀಯ ತರಕಾರಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.


ಅಷ್ಟಮಿ ಹಿನ್ನೆಲೆಯಲ್ಲಿ ಕೆಲವು ತರಕಾರಿ ಧಾರಣೆಯಲ್ಲಿ ಏರಿಕೆಯಾಗಿದೆ. ಸ್ಥಳೀಯ ಬೆಂಡೆ 200 ರೂ., ಸ್ಥಳೀಯ ಹಾಗಲಕಾಯಿ 100 ರೂ., ಸ್ಥಳೀಯ ತೊಂಡೆಕಾಯಿ 130 ರೂ, ಸ್ಥಳೀಯ ಮುಳ್ಳು ಸೌತೆ 60 ರೂ. ದರದಲ್ಲಿ ಮಾರಾಟವಾಗಿದೆ. ಇದು ಕಳೆದ ವಾರದ ದರಕ್ಕಿಂತ 30 ರಿಂದ 60 ರೂ. ಹೆಚ್ಚಿದೆ. ಹರಿವೆ ದಂಟು, ಮಟ್ಟು ಗುಳ್ಳ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟವಾಗಿದೆ.


ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೂಡೆ ಜನಪ್ರಿಯ. ಪ್ರತಿ ವರ್ಷವೂ ಗ್ರಾಹಕರು ಮೂಡೆ ಮುಗಿ ಬಿದ್ದು ಖರೀದಿಸುತ್ತಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮೂಡೆ ದರ ಹೆಚ್ಚುತ್ತಲೇ ಇದೆ. ಈ ವರ್ಷ 100 ರೂಪಾಯಿಗೆ ದೊಡ್ಡ ಗಾತ್ರದ 6 ಹಾಗೂ ಸಣ್ಣ ಗಾತ್ರದ 8 ಮೂಡೆಗಳಷ್ಟೇ ಗ್ರಾಹಕರಿಗೆ ಲಭ್ಯವಾಗಿದೆ. ಮೂಡೆ ತಯಾರಿಸಲು ಕಷ್ಟವಿದೆ. ಅದಕ್ಕೆ ಬೇಕಾದ ಪರಿಕರಗಳನ್ನು ದೂರದಿಂದ ಕಡಿದು ತರಬೇಕು. ಹಾಗಾಗಿ ದರ ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಾರೆ ಮಾರಾಟಗಾರ ಸಂದೀಪ್.


ಈ ಬಾರಿ ಹೂವಿನ ದರ ಕಡಿಮೆಯಾಗಿದೆ. ಸೇವಂತಿಗೆ ಮಾರ್ ಒಂದರ 50 ರೂ., ಬಿಳಿ ಸೇವಂತಿಗೆ 30 ರೂ., ಕಾಕಡ ಮಲ್ಲಿಗೆ 40ರೂ., ಗುಲಾಬಿ 80 ರೂ., ಜೀನ್ಯ 75 ರೂ., ಶುಂಠಿ ಗಿಡಕ್ಕೆ 30 ರೂ., ಸಿಯಾಳ 40ರೂ. ದರದಲ್ಲಿ ಮಾರಾಟ ಮಾಡಲಾಗಿದೆ.


ಹಾಸನ, ಬೆಂಗಳೂರು, ತುಮಕೂರು ಮುಂತಾದ ಕಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅಷ್ಟೊಂದು ಗೌಜಿಯಿಂದ ಆಚರಿಸುತ್ತಿಲ್ಲ. ಹಾಗಾಗಿ ಅಲ್ಲಿನ ಹೂವಿನ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಹೂವು ಹಿಡಿದುಕೊಂಡು ಕರಾವಳಿಗೆ ಬಂದಿದ್ದಾರೆ. ಖಾಯಂ ವ್ಯಾಪಾರಿಗಳಿಗಿಂತ ಇವರು ಅಗ್ಗದ ದರದಲ್ಲಿ ನೀಡುತ್ತಿರುವುದರಿಂದ ಗ್ರಾಹಕರಿಗೆ ಇದರಿಂದ ಕೊಂಚ ಲಾಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net