

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.6ರಂದು ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ 7ರಂದು ನಡೆಯಲಿರುವ ಮೊಸರು ಕುಡಿಕೆಗೆ ಸಿದ್ಧತೆ ಆರಂಭಗೊಂಡಿದೆ.
ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿವೆ. ಮೊಸರು ಕುಡಿಕೆಗೆ ಕಂಬಗಳನ್ನು ಹಾಕಲಾಗುತ್ತಿದೆ. ಅದಕ್ಕೆ ಕಟ್ಟಲು ಬೇಕಾದ ಮಡಕೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಮಂಗಳೂರಿನ ಕದ್ರಿ, ಅತ್ತಾವರ, ಕಾವೂರು, ಉರ್ವಾಸ್ಟೋರ್ ಮೊದಲಾದ ಕಡೆಗಳಲ್ಲಿ ಮೊಸರು ಕುಡಿಕೆ ವಿಜೃಂಭಣೆಯಿಂದ ನಡೆಯುತ್ತದೆ.
ಕದ್ರಿ ಕ್ಷೇತ್ರದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಮಕ್ಕಳಿಗೆ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ಸೆ.6ರಂದು ನಡೆಯಲಿದ್ದು, ಯಶಸ್ವಿ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಮಕ್ಕಳ ಹೆತ್ತವರು ಈಗಾಗಲೇ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಹಾಕಲು ಉತ್ಸುಕರಾಗಿದ್ದು, ಬೇಕಾದ ವಸ್ತುಗಳ ಜೋಡಣೆಯಲ್ಲಿ ತೊಡಗಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಕ್ರೀಡಾ ಸ್ಪರ್ಧೆಗಳು, ಯಕ್ಷಗಾನ ಬಯಲಾಟ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಗದಿಯಾಗಿವೆ. ಅಷ್ಟಮಿಗೆ ವಿಶೇಷ ತಿನಿಸುಗಳಾದ ಉಂಡೆ, ಚಕ್ಕುಲಿ, ಕಡುಬು, ಪಾಯಸ ತಯಾರಿಸಲು ಉತ್ಸುಕರಾಗಿದ್ದಾರೆ.