ಪ್ರಕೃತಿ ಸಂರಕ್ಷಣಿ ಕೃಷ್ಣನ ನೆಚ್ಚಿನ ಕಾರ್ಯ

udp-1-masostava
Published on

ಉಡುಪಿ: ನೆಲ, ಜಲ ಸಂರಕ್ಷಣಿ ಕೃಷ್ಣನಿಗೆ ಅತೀಪ್ರಿಯ ಕಾರ್ಯ. ಪ್ರಕೃತಿ ಮಾಲಿನ್ಯವಾದ ಮೇಲೆ ಶುದ್ಧ ಮಾಡುವುದಕ್ಕಿಂತ ಪ್ರಾರಂಭದಲ್ಲೇ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಕಾಳಿಂಗ ಸರ್ಪ ತನ್ನ ಭಕ್ತನಾಗಿದ್ದರೂ ಯಮುನಾ ನದಿಯ ನೀರನ್ನು ಕಲುಷಿತಗೊಳಿಸಿದ ಕಾರಣ ಕೃಷ್ಣ ಆತನನ್ನು ಮರ್ದಿಸಿದ್ದಾನೆ. ಧರ್ಮ ಸಂಸತಿಯ ಮೇಲೆ ಆಕ್ರಮಣಗಳು ಉಂಟಾದಾಗ ಅತೀವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸುತ್ತದೆ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಪರ್ಯಾಯ ಶ್ರೀ ಪುತ್ತಿಗೆ ಹಾಗೂ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಒಂದು ತಿಂಗಳು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮಾಸೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾಗವತದ ಕೃಷ್ಣ ಮತ್ತು ಭಾರತದ ಕೃಷ್ಣ. ಹೀಗೆ ಎರಡು ರೂಪಗಳನ್ನು ಕಾಣಬಹುದು. ಭಾಗವತದಲ್ಲಿ ಬಾಲ್ಯದಲ್ಲಿ ಲೀಲೆಗಳ ಮೂಲಕ ರಂಜಿಸಿದರೆ, ನಂತರ ಶಿಷ್ಟ ರಕ್ಷಣೆ ಮತ್ತು ದುಷ್ಟ ಶಿಕ್ಷಣ ಕೃಷ್ಣನ ಕಾರ್ಯಯೋಜನೆಯಾಗಿತ್ತು ಎಂದರು.

ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಶಾಸ್ತ್ರಗಳಲ್ಲಿ ಕೃಷ್ಣನ ಆರಾಧನೆಗೆ ಮಹತ್ವದ ಸ್ಥಾನವಿದೆ. ಕೃಷ್ಣನ ಉಪಾಸನೆಯಿಂದ ಸರ್ವಾಭೀಷ್ಟವನ್ನು ಭಕ್ತರು ಪಡೆಯಬಹುದು. ದೇವರನ್ನು ತೃಯುಗ ಹೂತಿ ಎನ್ನಲಾಗುತ್ತಿದ್ದು, ಕಲಿಯುಗದಲ್ಲಿ ಅವತಾರವಿಲ್ಲ. ಆದರೆ ಕಲಿಯುಗದ ಸಜ್ಜನರ ಅನುಗ್ರಹಕ್ಕಾಗಿ ದ್ವಾಪರ ಯುಗದ ಅಂತ್ಯ ಹಾಗೂ ಕಲಿಯುಗ ಪ್ರಾರಂಭ ಕಾಲಟ್ಟದಲ್ಲಿ ಕೃಷ್ಣ ಅವತಾರವೆತ್ತಿದ್ದಾನೆ ಎಂದರು.

ಭಂಡಾರಕೇರಿ ಮಠದ ಶ್ರೀ ವಿದ್ಯೆಶತೀರ್ಥ ಶ್ರೀಪಾದರು ಮಾತನಾಡಿ, ಕರ್ಮ ಯೋಗ,ಜ್ಞಾನ ಯೋಗ, ಭಕ್ತಿ ಯೋಗ ಭಗವಂತನನ್ನು ಸೇರುವ ಮಾರ್ಗಗಳಾಗಿದ್ದು, ಆತನ ಮಹಿಮೆ ಅರಿತು ಭಕ್ತಿ ಮಾಡಬೇಕು. ಮನಸ್ಸನ್ನು ಶುದ್ಧೀಕರಿಸದೆ ಜ್ಞಾನ ತುಂಬಿಸಿಕೊಂಡರೆ ಅಹಂಕಾರ ಬರುತ್ತದೆ. ಹೀಗಾಗಿ ಸತ್ಕರ್ಮಗಳ ಮೂಲಕ ಮನಸ್ಸನ್ನು ತೊಳೆದುಕೊಳ್ಳಬೇಕು ಎಂದರು. ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥಶ್ರೀಪಾದರು ಆಶೀರ್ವಚನ ನೀಡಿದರು.

ಮಾಜಿ ಶಾಸಕ ರಘುಪತಿ ಭಟ್​, ಮಾಜಿ ಶಾಸಕ ಲಾಲಾಜಿ ಮೆಂಡನ್​, ಉದ್ಯಮಿ ಪ್ರಸಾದ್​ ರಾಜ್​ ಕಂಚನ್​, ಗುರ್ಮೆ ಕಿಶೋರ್​ಕುಮಾರ್​, ಮಾಹೆ ಸಹ ಕುಲಾಧಿಪತಿ ಎಚ್​. ಎಸ್​. ಬಳ್ಳಾಲ್​, ಶಿಕ್ಷಣ ತಜ್ಞ ಪ್ರೊ. ರಾಧಾಕೃಷ್ಣ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಜೆಡಿಎಸ್​ ಜಿಲ್ಲಾಧ್ಯಕ್ಷ ಯೋಗೀಶ್​ ಶೆಟ್ಟಿ , ವಕೀಲ ಪ್ರದಿಪ್​ ರಾವ್​, ರತ್ನಾಕರ ಇಂದ್ರಾಳಿ ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕೃಷ್ಣ ಜನ್ಮಾಷ್ಟಮಿ ಅನ್​ಲೈನ್​ ಸ್ಪರ್ಧೆಗಳನ್ನು ಪುತ್ತಿಗೆ ಶ್ರೀಗಳು ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸುಗುಣೇಂದ್ರ ತೀರ್ಥರ ಆಶ್ರಮ ಗುರುಗಳಾದ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ಆರಾಧನೆಯಪ್ರಯುಕ್ತ ರಥಬೀದಿಯಲ್ಲಿ ಭಾವಚಿತ್ರ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net