ಮಂಗಳೂರು: ಕರಾವಳಿಯಾಧ್ಯಂತ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು. ಒಂದಡೆ ಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ ನಡೆದರೆ ಮನೆಮನೆಗಳಲ್ಲಿ ಪುಟ್ಟ ಕಂದಮ್ಮಗಳಿಗೆ ಮುದ್ದುಕೃಷ್ಣ ವೇಷ ದರಿಸಿ ಸಂಭ್ರಮಿಸಿರುವುದು ಕಂಡುಬಂತು. ಸಂಘಸಂಸ್ಥೆಯ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮ, ಸಂಭ್ರಮದ ಆಚರಣೆ ನಡೆಯಿತು.
ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಸಂಭ್ರಮದಿಂದ ನಡೆಯಿತು. ಜತೆಗೆ ವಿವಿಧ ಕಡೆಗಳಲ್ಲಿ ಕೃಷ್ಣವೇಷ ಸ್ಪರ್ಧೆ, ಮೊಸರುಕುಡಿಕೆ, ದೇವಸ್ಥಾನಗಳಲ್ಲಿ ರಾತ್ರಿ ಕೃಷ್ಣನಿಗೆ ಅರ್ಥ್ಯಪ್ರದಾನ ಇತ್ಯಾದಿ ನಡೆಯಿತು. ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಇಸ್ಕಾನ್ ಮಂಗಳೂರು ಶಾಖೆಯ ಆಶ್ರಯದಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೆಳಗ್ಗೆ ಹಂಪನಕಟ್ಟೆ ನಂದಿನಿ ಸಭಾಭವನ ಸರ್ಕಾರಿ ನೌಕರರ ಸಂಘದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಜಯಂತಿ ನಡೆಯಿತು. ಮಂಗಳೂರು ನಗರ-ಗ್ರಾಮಾಂತರ ಭಾಗದಲ್ಲಿರುವ ಶ್ರೀ ಕೃಷ್ಣ ಆಲಯದಲ್ಲಿ ಜನ್ಮಾಷ್ಟಮಿ ಆಚರಣೆ ಸಂಭ್ರಮದಿಂದ ನಡೆದಿದೆ. ಅಷ್ಟಮಿಯ ಪ್ರಯುಕ್ತ ನಗರದ ವಿವಿಧ ಕಡೆ ನಡೆಯುವ ಮೊಸರು ಕುಡಿಕೆಗೆ ಸಂಘ- ಸಂಸ್ಥೆಗಳ ಯುವಕರು ಕುಡಿಕೆ ಯನ್ನು ಬಣ್ಣಬಣ್ಣಗಳಿಂದ ಶೃಂಗರಿಸಿ ಅಣಿಗೊಳಿಸುತ್ತಿದ್ದಾರೆ. ಅತ್ತಾವರ, ಕದ್ರಿ, ಉರ್ವಸ್ಟೋರ್, ಕಾವೂರು ಸಹಿತ ಹಲವು ಕಡೆಗಳಲ್ಲಿ ಮಂಗಳವಾರ ನಡೆಯಲಿರುವ ವಿಜೃಂಭಣೆ ಮೊಸರು ಕುಡಿಕೆಗೆ ತಯಾರಿ ನಡೆಸಲಾಗಿದೆ.
*ವ್ಯಾಪಾರಿಗಳಿಗೆ ಫುಲ್ ಖುಷಿ
ಾಸನ, ಬೆಂಗಳೂರು, ತುಮಕೂರು ಮುಂತಾದ ಕಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅಷ್ಟೊಂದು ಗೌಜಿಯಿಂದ ಆಚರಿಸುತ್ತಿಲ್ಲ. ಹಾಗಾಗಿ ಅಲ್ಲಿನ ಹೂವಿನ ವ್ಯಾಪಾರಿಗಳು ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಹೂವು ಹಿಡಿದುಕೊಂಡು ಕರಾವಳಿಗೆ ಬರುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಸೋಮವಾರವೂ ಪುರಭವನ ಇಕ್ಕೆಲಗಳ ರಸ್ತೆಗಳು ಹೊರ ಜಿಲ್ಲೆಯ ಹೂವಿನ ವ್ಯಾಪಾರಿಗಳ ಹೂರಾಶಿ ಗಳು ಹಾಗೂ ಖರೀದಿದಾರರಿಂದ ತುಂಬಿತ್ತು. ರಥಬೀದಿ, ಸೆಂಟ್ರಲ್ ಮಾರ್ಕೆಟ್ ಸುತ್ತಮುತ್ತ ತರಕಾರಿ, ಹಣ್ಣು ಹಂಪಲು, ಮೂಡೆ ಮುಂತಾದ ವ್ಯಾಪಾರ ಬಿರುಸಿನಿಂದ ನಡೆದಿದ್ದು, ವ್ಯಾಪಾರಿಗಳು ಫುಲ್ಕುಷಿಯಾಗಿದ್ದಾರೆ. ಅಷ್ಟಮಿ ಹಿನ್ನೆಲೆಯಲ್ಲಿ ಕಡುಬು ತಯಾರಿಸಲು ಬಳಸುವ ಮೂಡೆಗಳಿಗೆ ಉತ್ತಮ ಬೇಡಿಕೆ ಇತ್ತು. ಹರಿವೆದಂಟು, ಶುಂಠಿಗಿಡ, ಬಾಳೆಎಲೆ ಹೆಚ್ಚಿನ ಪ್ರಮಾಣದಲ್ಲಿ ಸೊಮವಾರವೂ ಖರೀದಿಯಾಗಿದೆ.್ತ. ಸೇವಂತಿಗೆ ಜಾಜಿ, ಜೀನಿಯಾ, ಕಾಕಡ, ಮಲ್ಲಿಗೆ ಹೂವುಗಳ ದರಗಳಲ್ಲಿ ಸೋಮವಾರ ಏರಿಕೆಯಾಗಿದೆ.