

ನಂಜನಗೂಡು: ದಕ್ಷಿಣ ಕಾಶಿ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವ ಜು.9ರಿಂದ ಎಂಟು ದಿನಗಳವರೆಗೆ ನಡೆಯಲಿದ್ದು ದೇವಾಲಯ ಆಡಳಿತ ಮಂಡಳಿ ಸಕಲ ಸಿದ್ಧತೆಯೊಂದಿಗೆ ಸಜ್ಜುಗೊಂಡಿದೆ.
ಮಹೋತ್ಸವ ಹಿನ್ನೆಲೆಯಲ್ಲಿ ದೇವಾಲಯದ ಒಳ ಹಾಗೂ ಹೊರ ಆವರಣ ಸೇರಿದಂತೆ ಮಂಟಪ, ಕಚೇರಿ, ಸಮುಚ್ಚಯಗಳಿಗೆ ವಿದ್ಯುತ್ ದೀಪಾಲಂಕಾರ ಕಾರ್ಯ ಭರದಿಂದ ಸಾಗಿದೆ. ಮುಖ್ಯದ್ವಾರದಲ್ಲಿ ಚಪ್ಪರ, ತಳಿರು ತೋರಣಗಳ ಸಿಂಗಾರಕ್ಕೆ ಚಾಲನೆ ನೀಡಲಾಗಿದೆ. ದೇವಾಲಯದ ಒಳ ಮಂಟಪದಲ್ಲಿ ಸತತ ಆರು ದಿನಗಳವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗ ವೇದಿಕೆ ಸಿದ್ಧಗೊಳ್ಳುತ್ತಿದೆ.
ಗಿರಿಜಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗದಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದೆ. ದಾಸೋಹದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ.
ದೇವತಾ ಕಾರ್ಯ: ಶುಭಕೃತ್ ನಾಮ ಸಂವತ್ಸರದ ಆಷಾಢ ಶುದ್ಧ ಚತುರ್ಥಿ ದಿನವಾದ ಜು.9ರಂದು ಸಂಜೆ 5 ಗಂಟೆಗೆ ತೈಲ ಹರಿದ್ರಾಚೂರ್ಣ ಪ್ರದಾನ ನಂತರ ರಾತ್ರಿ 8 ಗಂಟೆಗೆ ವರಪೂಜಾ ಮಹೋತ್ಸವ ಜರುಗಲಿದೆ. ಜು.10ರಂದು ಬೆಳಗ್ಗೆ 9ಕ್ಕೆ ಮಂಗಳಸ್ನಾನ, ಮಧ್ಯಾಹ್ನ 12ಕ್ಕೆ ನಾಂದಿ ಗ್ರಹ ಯಜ್ಞ, ಸಂಜೆ 5ಕ್ಕೆ ಕಾಶಿಯಾತ್ರಾ ಮಹೋತ್ಸವ ಅಂಗವಾಗಿ ಜನಪದ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಸಂಜೆ 7.15 ರಿಂದ 7.45ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸಂಬಂಧ ಮಾಲಾ ನಿರೀಕ್ಷಣಾ ಪೂರ್ವಕ ಕಲ್ಯಾಣ ಮಂಟಪ ಪ್ರವೇಶ ನಂತರ ಧಾರಾ ಮಹೋತ್ಸವ ಜರುಗಲಿದೆ.
ಬಳಿಕ ಮೂರು ದಿನಗಳ ಕಾಲ ಔಪಾಸನಾ, ಉರುಟಣೆ, ಉಯ್ಯಲೋತ್ಸವ, ಪಾಕಿನಿ ಉತ್ಸವ, ಗೃಹಪ್ರವೇಶ ಮಹೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯ ಹಮ್ಮಿಕೊಳ್ಳಲಾಗಿದೆ. ಜು.14 ರಿಂದ ಸತತ ಮೂರು ದಿನ ಸಂಜೆ 7 ಗಂಟೆಗೆ ಕಪಿಲಾ ಸ್ನಾನಘಟ್ಟದಲ್ಲಿ ಪಾರ್ವತಿದೇವಿ ಸಮೇತ ಶ್ರೀಕಂಠೇಶ್ವರಸ್ವಾಮಿ ಉತ್ಸವಮೂರ್ತಿಯ ವಿದ್ಯುತ್ ದೀಪಾಲಂಕೃತ ತೇಲುವ ತೆಪ್ಪೋತ್ಸವ ಸಾಗಲಿದೆ. ಜು.16ರಂದು ರಾತ್ರಿ ನಡೆಯುವ ಶಯನೋತ್ಸವದೊಂದಿಗೆ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಜು.11 ರಿಂದ ಜು.16ರವರೆಗೆ ಆರು ದಿನಗಳ ಕಾಲ ದೇವಾಲಯದ ಒಳ ಮಂಟಪದ ರಂಗ ವೇದಿಕೆಯಲ್ಲಿ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9.30ವರೆಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು, ಮೈಸೂರು, ನಂಜನಗೂಡು ಸೇರಿದಂತೆ ನಾನಾ ಕಡೆಯಿಂದ ಆಗಮಿಸುವ ಹಲವು ಕಲಾ ತಂಡಗಳು ಸಾಂಸ್ಕೃತಿಕ ಮೆರುಗು ನೀಡಲಿವೆ. ಸುಗಮ ಸಂಗೀತ, ಭರತನಾಟ್ಯ, ಭಜನೆ, ಭಕ್ತಿಗೀತೆ, ದೇವರನಾಮ, ಹರಿಕಥೆ, ಶಾಸ್ತ್ರೀಯ ಸಂಗೀತ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.