ಶ್ರೀಕಂಠಪ್ಪ ಬಡ ಭಕ್ತರ ಕಷ್ಟ ಪರಿಹರಿಸಪ್ಪ…

6NGD1
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದ ಹುಂಡಿ ಎಣಿಕೆಯಲ್ಲಿ ಭಕ್ತರು ಹುಂಡಿ ಹಣದ ಜತೆಗೆ ಸಲ್ಲಿಸಿರುವ ಪತ್ರಗಳು.
Published on

ನಂಜನಗೂಡು: ಉಳ್ಳವರು ಲಾಡ್ಜ್‌ನಲ್ಲಿ ಉಳಿಯುವರು, ನಾನೇನು ಮಾಡಲಿ ಬಡವನಯ್ಯ, ದೇವಾಲಯದ ಮುಂದೆ ಮಲಗಿದರೆ ಲಾಠಿಯಲ್ಲಿ ತಿವಿಯುವರು, ಬೂಟಿನಲ್ಲಿ ಒದೆಯುವರು, ಲಾಡ್ಜ್‌ಗೆ ಹೋಗೆಂದು ಅಡ್ರೆಸ್ ಕೊಡುವರು, ನಾ ಹೇಗೆ ಹೋಗಲಿ ಬಡವನಯ್ಯ… ಶ್ರೀಕಂಠಪ್ಪ ನಿನ್ನ ಬಡ ಭಕ್ತರ ಕಷ್ಟ ನೀನೇ ಪರಿಹರಿಸಪ್ಪ…


ಇದೇನಿದು ವಚನ ಎಂದು ಭಾವಿಸಬೇಡಿ. ಇದು ಬಡ ಭಕ್ತನೊಬ್ಬನ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ಬಳಿ ವಿನಮ್ರವಾಗಿ ಬೇಡಿಕೊಂಡಿರುವ ಪರಿ.


ಹೌದು, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಮಂಗಳವಾರ ನಡೆದ ಹುಂಡಿ ಎಣಿಕೆಯಲ್ಲಿ ಭಕ್ತರೊಬ್ಬರು 100 ರೂ. ನೋಟಿನೊಂದಿಗೆ ಸೇರಿಸಿ ಬರೆದಿದ್ದ ಪತ್ರ ಎಣಿಕೆ ಸಂದರ್ಭದಲ್ಲಿ ಸಿಕ್ಕಿದೆ. ಇದೊಂದೆ ಅಲ್ಲ. ದೇವಾಲಯದಲ್ಲಿ ಭಕ್ತರು ಎದುರಿಸುತ್ತಿರುವ ವಸತಿ ಸಮಸ್ಯೆ, ಮೂಲ ಸೌಲಭ್ಯಗಳ ಬಗ್ಗೆ ಪರಿ ಪರಿಯಾಗಿ ಭಕ್ತರು ತಮ್ಮ ಬಿನ್ನಹಗಳನ್ನು ಪತ್ರಗಳ ಮೂಲಕ ವ್ಯಕ್ತಪಡಿಸುವ ಮೂಲಕ ಜಡ್ಡುಗಟ್ಟಿರುವ ದೇವಾಲಯದ ಆಡಳಿತ ವ್ಯವಸ್ಥೆ ವಿರುದ್ಧ ಹರಿಹಾಯ್ದಿದ್ದಾರೆ.


ಪ್ರತಿ ತಿಂಗಳು ನಡೆಯುವ ಹುಂಡಿ ಎಣಿಕೆ ಸಂದರ್ಭದಲ್ಲಿ ಇಂತಹ ಅನೇಕ ಪತ್ರಗಳು ಭಕ್ತರಿಂದ ಸಲ್ಲಿಕೆಯಾಗುತ್ತಿವೆ. ಈ ಬಾರಿ 150ಕ್ಕೂ ಹೆಚ್ಚು ಪತ್ರಗಳು ಎಣಿಕೆ ವೇಳೆ ಲಭ್ಯವಾಗಿದ್ದು, ಬೆಂಗಳೂರು, ಮಂಡ್ಯ, ಕೆ.ಎಂ.ದೊಡ್ಡಿ ಸೇರಿದಂತೆ ರಾಜ್ಯದ ನಾನಾ ಮೂಲೆಗಳ ವಿಳಾಸದಲ್ಲಿ ಪತ್ರ ಬರೆದಿರುವ ಭಕ್ತರು, ಆ ಪತ್ರಕ್ಕೆ 500 ರೂ., 100 ರೂ., 50 ರೂ. ನೋಟುಗಳನ್ನು ಟ್ಯಾಗ್ ಮಾಡಿ ತಮ್ಮ ನಿವೇದನೆಯನ್ನು ದೇವರಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಈ ಹಣವನ್ನು ದೇವಾಲಯಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಬಳಕೆ ಮಾಡುವಂತಾಗಲಿ ಎಂಬ ಆಶಯವನ್ನೂ ಭಕ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಎಣಿಕೆಯಲ್ಲಿ ದೊರೆತಿರುವ ಪತ್ರಗಳಲ್ಲಿ ಬಹುತೇಕ ಭಕ್ತರು ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆಯೇ ತಮ್ಮ ಅಹವಾಲು ಹೇಳಿಕೊಂಡಿದ್ದಾರೆಯೇ ಹೊರತು ವೈಯಕ್ತಿಕ ಬೇಡಿಕೆಗಳು ತೀರಾ ಕಡಿಮೆ ಎಂಬುದು ಪತ್ರಗಳನ್ನು ಗಮನಿಸಿದಾಗ ಕಂಡುಬಂದ ಅಂಶವಾಗಿದೆ.


ಮಾಸಿಕ ಒಂದು ಕೋಟಿಗೂ ಅಧಿಕ ಆದಾಯವಿರುವ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ದೂರದ ಊರುಗಳಿಂದ ಬರುವವರಿಗೆ ಸರಿಯಾದ ವಸತಿ ವ್ಯವಸ್ಥೆಯಿಲ್ಲ. ಕೈಸಾಲೆ ಹಾಗೂ ದೇವಾಲಯ ಮುಂದೆ ಮಲಗಿದರೆ ಲಾಠಿಯಲ್ಲಿ ತಿವಿದು, ಬೂಟಿನಲ್ಲಿ ಒದ್ದು ಎಬ್ಬಿಸಿ ಲಾಡ್ಜ್‌ಗೆ ಹೋಗಿ ರೂಮು ಪಡೆದು ಮಲಗಿ ಎಂದು ಭಕ್ತರಿಗೆ ಕಿರುಕುಳ ಕೊಡುತ್ತಾರೆ. ಆದರೆ ಲಾಡ್ಜ್‌ಗಳಲ್ಲಿ ಅಷ್ಟು ಹಣ ಕೊಟ್ಟು ವಾಸ್ತವ್ಯ ಹೂಡುವಷ್ಟು ನಾವು ಶಕ್ತರಲ್ಲ. ಇನ್ನು ಕಪಿಲಾ ನದಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡುವ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಅನುಕೂಲಕರ ವಾತಾವರಣವಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಉರುಳು ಸೇವೆ ಮಾಡಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ನಿನಗೆ ಪತ್ರ ಬರೆಯುತ್ತಿರುವೆ ಎಂದು ಹೀಗೆ ಅನೇಕ ಸಮಸ್ಯೆಗಳನ್ನು ಭಕ್ತರು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದಾಗಿದೆ.


ಈ ರೀತಿ ಭಕ್ತರು ಶ್ರೀಕಂಠೇಶ್ವರಸ್ವಾಮಿಗೆ ಪತ್ರದ ಮೂಲಕ ಹುಂಡಿಯಲ್ಲಿ ಹಾಕಿರುವ ಪತ್ರದಲ್ಲಿ ತಮ್ಮ ಮನದಾಳದ ವೇದನೆಯನ್ನು ಹಂಚಿಕೊಂಡಿರುವುದು ಸತ್ಯವಾಗಿದೆ. ದೇವಾಲಯದಲ್ಲಿ ಸರಿಯಾದ ವಸತಿ ವ್ಯವಸ್ಥೆಯಿಲ್ಲ. ಹುಣ್ಣಿಮೆ, ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ದೂರದ ಊರುಗಳಿಂದ ಆಗಮಿಸುವ ಭಕ್ತರ ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಕಳೆದ ಒಂದೂವರೆ ವರ್ಷಗಳ ಹಿಂದೆ 75 ಕೊಠಡಿಗಳ ವಸತಿ ಸಮುಚ್ಛಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ಆ ಯೋಜನೆ ಇನ್ನೂ ಜಾರಿಯಾಗಿಲ್ಲ. ಇಲ್ಲಿನ ಅವ್ಯವಸ್ಥೆ, ಮೂಲ ಸೌಕರ್ಯಗಳ ಕೊರತೆ ಬಗ್ಗೆ ಭಕ್ತರು ಬೇಸರ ಮಾಡಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಭಕ್ತರಿಂದ ಕೋಟ್ಯಂತರ ರೂ. ಆದಾಯವಿದ್ದರೂ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಏಕಿಷ್ಟು ತಾತ್ಸಾರ ಎಂಬುದು ಭಕ್ತರ ಪ್ರಶ್ನೆಯೂ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net