ಶಕ್ತಿ ಸ್ವರೂಪಿಣಿ ಶ್ರೀಹುಣಸಮ್ಮ ದೇವಿ

ಶಕ್ತಿ ಸ್ವರೂಪಿಣಿ ಶ್ರೀಹುಣಸಮ್ಮ ದೇವಿ
Published on

ಭೇರ್ಯ ಸಿ ಸಿ ಮಹದೇವ್ ಸಾಲಿಗ್ರಾಮ

ತಾಲೂಕಿನ ಮಿರ್ಲೆ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಹುಣಸಮ್ಮ ದೇವಿಗೆ 800 ವರ್ಷ ಇತಿಹಾಸ ಇದ್ದು, ಭಕ್ತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಶಕ್ತಿ ಸ್ವರೂಪಿಣಿಯಾಗಿ ಗ್ರಾಮದಲ್ಲಿ ನೆಲೆಸಿದ್ದಾಳೆ.

ಮಿರ್ಲೆ ಗ್ರಾಮದ ಸುತ್ತ ಮುತ್ತ ಭಕ್ತರನ್ನು ಕಾಯಲು ಕೊಡಗಿನಿಂದ ನಾನು ಆಗಮಿಸಿದ್ದು ಗ್ರಾಮದ ಹೆಬ್ಬಾಗಿಲೆನಲ್ಲಿರುವ ಹುಣಸೆಮರದಲ್ಲಿ ನೆಲೆಸಿರುತ್ತೇನೆ. ನನಗೊಂದು ಗುಡಿ ಕಟ್ಟಿಸು ಎಂದು ಪಾಳೆಗಾರ ಮಾಚನಾಯಕನ ಕನಸಿನಲ್ಲಿ ಶ್ರೀ ಹುಣಸಮ್ಮ ದೇವತೆ ತಿಳಿಸುತ್ತಾಳೆ. ತಾಯಿಯ ಆಜ್ಞೆಯನ್ನು ಪರಿಪಾಲಿಸುವ ಸಲುವಾಗಿ ಗ್ರಾಮದಲ್ಲಿ ಪಾಳೆಗಾರ ಮಾಚನಾಯಕ ಕೆರೆ ಮತ್ತು ಹುಣಸಮ್ಮ ದೇವಸ್ಥಾನವನ್ನು ನಿರ್ಮಾಣ ಮಾಡಿದ. ಪಾಳೆಗಾರ ಮಾಚನಾಯಕ ಸೈನ್ಯ ಕಟ್ಟಿಕೊಂಡು ತಾಯಿಯ ಆಶೀರ್ವಾದ ಪಡೆದು ಹೋದ ಎಲ್ಲ ಯುದ್ಧಗಳನ್ನು ಗೆಲ್ಲುತ್ತಿದ್ದ ಎಂದು ಹೇಳಲಾಗುತ್ತಿದೆ.

ಇಂದಿನ ಕಾಲದಲ್ಲೂ ಕಷ್ಟದಲ್ಲಿರುವ ಭಕ್ತರನ್ನು ಕಾಪಾಡುತ್ತಿರುವ ಶ್ರೀ ಹುಣಸಮ್ಮ ದೇವಿಯ ಮಹಿಮೆ ಇನ್ನಷ್ಟು ದೊಡ್ಡದಾಗಿ ಬೆಳೆದಿದೆ. ಹಾಗಾಗಿ ಭಕ್ತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಭಕ್ತರ ನಂಬಿಕೆಯನ್ನು ಸುಳ್ಳು ಮಾಡದ ಶಕ್ತಿ ದೇವತೆ ಇಂದಿಗೂ ಭಕ್ತರನ್ನು ಕಾಪಾಡುತ್ತ ಬರುತ್ತಿದ್ದಾಳೆ. ಗ್ರಾಮದ ಸುತ್ತಮುತ್ತ ಒಂಬತ್ತು ಗ್ರಾಮಗಳ ಗ್ರಾಮ ದೇವತೆಯಾಗಿ ಎಲ್ಲ ಭಕ್ತರ ಕಷ್ಟ ಕಾಯುತ್ತಾ ಭಕ್ತರಿಗೆ ಶ್ರೀ ರಕ್ಷೆಯಾಗಿ, ದುಷ್ಟ ಶಕ್ತಿಗಳ ಸಂಹಾರಿಣಿಯಾಗಿ ಜನರನ್ನು ರಕ್ಷಿಸುತ್ತಿದ್ದಾಳೆ.

ತಪ್ಪೊಪ್ಪಿಕೊಂಡ ತಕ್ಷಣವೇ ಸೈನ್ಯಕ್ಕೆ ಶಕ್ತಿ: ಆಗಿನ ಕಾಲದಲ್ಲಿ ಮಿರ್ಲೆ ಸುತ್ತಮುತ್ತ ದೊಡ್ಡ ಅರಣ್ಯ ಪ್ರದೇಶವಿತ್ತು, ಗ್ರಾಮದ ಹೆಬ್ಬಾಗಿಲಿನಲ್ಲಿ ಒಂದು ಹುಣಸೆ ಮರವಿತ್ತು. ಆ ಮರದ ಕೆಳಗೆ ದೇವಿ ನೆಲೆಸಿದ್ದಳು ಎನ್ನಲಾಗಿದೆ. ಚೋಳರು ಈ ಮಾರ್ಗದಲ್ಲಿ ಹೋಗುವ ಸಂದರ್ಭದಲ್ಲಿ ಒಂದು ರಾತ್ರಿ ಈ ಮರದ ಕೆಳಗೆ ತಂಗುತ್ತಾರೆ. ಆ ತಂಡದಲ್ಲಿ ಒಬ್ಬ ಮಧ್ಯರಾತ್ರಿ ಎದ್ದು ಆ ಹುಣಸೆ ಮರದ ಬುಡದ ಹತ್ತಿರ ಹೋಗುತ್ತಾನೆ. ಆಗ ಅಲ್ಲಿದ್ದ ದೇವಿಯ ಒಡವೆಗಳು ಈತನ ಕಣ್ಣಿಗೆ ಬೀಳುತ್ತವೆ. ಎಲ್ಲವನ್ನು ದೋಚಿಕೊಂಡು ಹೋಗುತ್ತಾರೆ. ನಂತರ ಮೂರೇ ದಿನದಲ್ಲಿ ಸೈನ್ಯದ ಎಲ್ಲ ಸದಸ್ಯರಿಗೂ ವಾಂತಿ-ಭೇದಿಯಾಗಿ ಶಕ್ತಿ ಕಳೆದುಕೊಳ್ಳುತ್ತಾರೆ. ಕೇರಳದಿಂದ ದೊಡ್ಡ ಋಷಿ ಮುನಿಗಳನ್ನು ಕರೆಸಿ, ತಂಡದಿಂದ ವಿಶೇಷ ಪೂಜೆ ಮಾಡಿಸುವಾಗ ಒಡವೆ ಕಳವು ಆಗಿರುವ ಬಗ್ಗೆ ಸತ್ಯಾಂಶ ಹೊರಬರುತ್ತದೆ. ಋಷಿಗಳ ಮೂಲಕ ದೇವಿಗೆ ತಪ್ಪೊಪ್ಪಿಕೊಂಡು ತಾಯಿಯ ಪಾದಕ್ಕೆ ಅರ್ಪಿಸುತ್ತಾರೆ. ಆಗ ಮತ್ತೆ ಸೈನ್ಯಕ್ಕೆ ಶಕ್ತಿ ಹೆಚ್ಚುತ್ತದೆ ಎಂದು ಪುರಾಣ್ಯಾತಿಹ್ಯ ಹೇಳುತ್ತದೆ.

ಹೆಣ್ಣು ಮಕ್ಕಳಿಗೆ ಶ್ರೀರಕ್ಷೆ: ಪ್ರತಿ ವರ್ಷ ದೇವಿಯ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಮಿರ್ಲೆ ಮಾಳನಾಯಕನಹಳ್ಳಿ, ಶ್ಯಾಬಾಳು, ನಾಟಕನಹಳ್ಳಿ, ಬೀಚನಹಳ್ಳಿ ಕೊಪ್ಪಲು, ಹನುಮನಹಳ್ಳಿ, ಹಳೆಮಿರ್ಲೆ, ಕೋಡಿಯಾಲ, ಬೀಚನಹಳ್ಳಿ ಗ್ರಾಮದ ಹೆಣ್ಣು ಮಕ್ಕಳು ಮತ್ತು ಭಕ್ತರು ಜಾತ್ರೆಯಲ್ಲಿ ತಪ್ಪದೆ ಭಾಗವಹಿಸುತ್ತಾರೆ. ತಂಬಿಟ್ಟಿನ ಆರತಿ ದೀಪ ಹಚ್ಚಿ ಮೆರವಣಿಗೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ದೇವಸ್ಥಾನಕ್ಕೆ ಮಾರ್ಗ: ಮೈಸೂರಿನಿಂದ ಕೆ.ಆರ್.ನಗರಕ್ಕೆ ಬಂದು ಹಂಪಾಪುರ ಮಿರ್ಲೆಗೆ ತಲುಪಬಹುದು. ಮೈಸೂರು ಕೆ.ಆರ್.ನಗರ ಚುಂಚನ ಕಟ್ಟೆ ಮೂಲಕ ಮಿರ್ಲೆಗೆ ತಲುಪಬಹುದು. ಹಾಸನ ಹೊಳೆನರಸೀಪುರ ಭೇರ್ಯ ಮೂಲಕ ಮಿರ್ಲೆಗೆ ತಲುಪಬಹುದು. ಕೊಡಗು ರಾಮನಾಥಪುರ ಎರಡು ಕಡೆಯಿಂದಲೂ ಸಾಲಿಗ್ರಾಮಕ್ಕೆ ಬಂದು ಮಿರ್ಲೆ ಮೂಲಕ ದೇವಾಲಯಕ್ಕೆ ತಲುಪಬಹುದು.

ಶುಭ ಕಾರ್ಯಕ್ಕೂ ಮೊದಲು ಪ್ರಾರ್ಥನೆ: ಈ ಭಾಗದ ಜನರು ಯಾವುದೇ ಶುಭ ಕಾರ್ಯ ಮಾಡುವ ಮೊದಲು ಹಾಗೂ ಚುನಾವಣೆ ಸ್ಪರ್ಧಿಸುವವರು ದೇವಿಯಲ್ಲಿ ಪ್ರಾರ್ಥಿಸಿ ನಂತರ ಮುಂದಿನ ಕಾರ್ಯ ನಡೆಸುವುದು ವಾಡಿಕೆಯಾಗಿದೆ. ಭಕ್ತರು ಅರಸಿಕೊಂಡಿದ್ದನ್ನು ಫಲ ನೀಡದೆ ನಿರಾಶೆ ಮಾಡುವುದಿಲ್ಲ ಎಂಬ ನಂಬಿಕೆ ಭಕ್ತರದ್ದು. ಚುನಾವಣೆ ಪೂರ್ವದಲ್ಲಿ ರಾಜಕಾರಣಿಗಳು, ಇತರ ಗಣ್ಯರು, ಉದ್ಯಮಿಗಳು ವಿಶೇಷ ಪೂಜೆ ಸಲ್ಲಿಸಿರುವ ನಿದರ್ಶನಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net