

ಬ್ಯಾಡಗಿ: ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಶ್ರೀಹೊಳಬಸವೇಶ್ವರ ಹಾಗೂ ಕರಿಯಮ್ಮದೇವಿ ಜಾತ್ರಾಮಹೋತ್ಸವ ಅಂಗವಾಗಿ ಬುಧವಾರ ರಥೋತ್ಸವ ಜರುಗಿತು.
ಬೆಳಗ್ಗೆ 8 ಗಂಟೆಗೆ ದೇವರ ಮೆರವಣಿಗೆ ನಡೆಯಿತು. ವೀರಗಾಸೆ ತಂಡದವರು ಗುಗ್ಗಳ ಸೇವೆಯಲ್ಲಿ ತೊಡಗಿದ್ದರು. ರಥೋತ್ಸವ ಸಾಗುತ್ತಿದ್ದಂತೆ ಸಾವಿರಾರು ಭಕ್ತರು ಹರಹರ ಮಹಾದೇವ ಘೋಷಣೆ ಕೂಗಿದರು. ಮಹಿಳೆಯರು ಆರತಿ ಹಿಡಿದು ಹೊಳೆಬಸವೇಶ್ವರ ದೇವರ ಪಲ್ಲಕ್ಕಿಯೊಂದಿಗೆ ತೆರಳಿದರು.
ಸುತ್ತಲಿನ ಗ್ರಾಮಗಳ ಭಕ್ತರು ಹಾಗೂ ಹೊಸ ವಧುವರರು ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ ಎಸೆದು ಬೇಡಿಕೆಗಳ ಸಂಕಲ್ಪ ಮಾಡಿಕೊಳ್ಳುತ್ತಾರೆ. ಕೆಲವರು ಬಾಳೆಹಣ್ಣು ಎಸೆದು ಹರಕೆ ತೀರಿಸುವ ಸಂಪ್ರದಾಯವಿದೆ. ಗ್ರಾಮದ ಕೃಷಿ ಸಮುದಾಯದ ಕುಟುಂಬಗಳು ಸಿಂಗರಿಸಿದ ಎತ್ತುಗಳ ಚಕ್ಕಡಿ ಕಟ್ಟಿಕೊಂಡು ಬರುವುದು ವಿಶೇಷ.
ಜಾನಪದ ಶೈಲಿಯ ವೀರಗಾಸೆ ಕಲಾತಂಡದ 15ಕ್ಕೂ ಹೆಚ್ಚು ವೇಷಧಾರಿಗಳು ಜಾತ್ರೆಯಲ್ಲಿ ಗಮನ ಸೆಳೆದರು. ತಂಡದಲ್ಲಿ ಕೆಲ ಯುವ ವೀರಗಾಸೆ ಕುಣಿತಗಾರರು ಕತ್ತಿ ಬೀಸುವುದು, ಕಾಯಿ ಒಡೆಯುವುದು, ಕರ್ಪೂರ ಹಚ್ಚುವುದು ಇತ್ಯಾದಿಗಳನ್ನು ನೋಡಲು ಜನ ಮುಗಿಬಿದ್ದಿದ್ದರು.