ಶ್ರೀದೇವಿ ಪುರಾಣ ಪ್ರವಚನ ಇಂದಿನಿಂದ

Published on

ಕಂಪ್ಲಿ: ನಾಡಹಬ್ಬ ದಸರಾ ಪ್ರಯುಕ್ತ ಪಟ್ಟಣ ಸೇರಿ ತಾಲೂಕಿನ ನಾನಾ ಕಡೆಗಳಲ್ಲಿ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಅ.3ರಿಂದ ಅ.12ರತನಕ ನಡೆಯಲಿದೆ.

ಇಲ್ಲಿನ ಕಾಳಿಕಾ ಕಮಠೇಶ್ವರ ದೇವಸ್ಥಾನದ ವಿಶ್ವಕರ್ಮ ಭವನದಲ್ಲಿ ನಿತ್ಯ ಸಂಜೆ ಹಾಲಗಿಯ ಕೊಟ್ರಯ್ಯಸ್ವಾಮಿ ಹಿರೇಮಠದಿಂದ 67ನೇ ವರ್ಷದ ಶ್ರೀ ದೇವಿ ಪುರಾಣ ಪ್ರವಚನ, ರೂಪನಗುಡಿಯ ದೊಡ್ಡ ಬಸಪ್ಪಾಚಾರ್ಯರಿಂದ ಪುರಾಣ ಪಠಣ, ಮೆಟ್ರಿ ನಾಗರಾಜ ಆಚಾರ್ ತಬಲ ವಾದನ ನೀಡಲಿದ್ದಾರೆ. ರಾತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಪದಾಧಿಕಾರಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರೀ ದೇವಿ ಪುರಾಣ ಮಹೋತ್ಸವ ಸಮಿತಿಯಿಂದ 15ನೇವರ್ಷದ ಶ್ರೀ ದೇವಿ ಲೀಲಾಮೃತ ಮಹಾತ್ಮೆ ಪ್ರವಚನ ಜರುಗಲಿದ್ದು, ಬಳೂಟಗಿಯ ಶಿವಕುಮಾರಸ್ವಾಮಿಗಳಿಂದ ಪ್ರವಚನ, ಸೋಮನಳಾದ ಶರಣಬಸವಕುಮಾರಸ್ವಾಮಿಗಳಿಂದ ವಾಚನ ಗದುಗಿನ ಪಂಚಾಕ್ಷರಿ ಹೂಗಾರರಿಂದ ತಬಲಾವಾದನ ನಡೆಯಲಿದೆ. ಚಿತ್ರಗಾರ ಸುಮಿತ್ರಮ್ಮ ಪರಶುರಾಮಪ್ಪ ಕುಟುಂಬದವರಿಂದ ಆದಿಶಕ್ತಿ ಮೂರ್ತಿ ಅಲಂಕರಿಸಲಿದ್ದಾರೆ.

ಶ್ರೀಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಅ.3ರಿಂದ ಅ.12ರತನಕ ಗಣೇಶ, ಮಹಾಲಕ್ಷ್ಮೀ ಸರಸ್ವತಿ, ಎಮ್ಮಿಗನೂರು ಜಡಿತಾತ, ಧರ್ಮಸ್ಥಳ ಮಂಜನಾಥಸ್ವಾಮಿ, ಜಗದ್ಗುರು ರೇಣುಕಾಚಾರ್ಯ-ಜಗಜ್ಯೋತಿ ಬಸವೇಶ್ವರ, ವೀರಭದ್ರಸ್ವಾಮಿ, ಹೊರನಾಡು ಅನ್ನಪೂರ್ಣೇಶ್ವರಿ, ಆದಿಶಕ್ತಿ, ಶಿವಪಾರ್ವತಿ ಕಲ್ಯಾಣ ಗೊಂಬೆ ಪ್ರದರ್ಶನಗೊಳ್ಳಲಿದೆ. ದೇವಾಂಗ ಸಮಾಜದ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ ನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀದೇವಿ ಪುರಾಣ ಪಠಣ, ಸಂಜೆ 6ಗಂಟೆಗೆ ಶ್ರೀ ಬನಶಂಕರಿ ದೇವಾಂಗ ಮಹಿಳಾ ಸಂಘದಿಂದ ಮಂತ್ರಪಠಣ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net