ಶ್ರೀದೇವಿಯನ್ನು ಸಾಕ್ಷಾತ್ಕರಿಸಿಕೊಂಡಿದ್ದ ಮರಿಶಿವಯೋಗಿಗಳು

23mnv02
Published on

ಮಾನ್ವಿ: ಬಳಗಾನೂರು ಗ್ರಾಮದ ಮಹಾತಪಸ್ವಿ ಮರಿಶಿವಯೋಗಿಗಳು ನಿತ್ಯ ದೇವಿಯೊಂದಿಗೆ ಸಂಭಾಷಿಸುವ ಶಕ್ತಿಯನ್ನು ತಪಸ್ಸಿನಿಂದ ಪಡೆದುಕೊಂಡಿದ್ದರು ಎಂದು ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮಿಗಳು ಹೇಳಿದರು.

ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಹಾ ಶಿವಯೋಗಿಗಳ ಮಠದಲ್ಲಿ 96 ನೇ ಜಾತ್ರಾ ಮಹೋತ್ಸವ ಅಂಗವಾಗಿ ಬಳಗನೂರು ಮಹಾತಪಸ್ವಿ ಮರಿಶಿವಯೋಗಿಗಳ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಜಿಲ್ಲೆಯಲ್ಲಿ ಅವಧೂತ ಪರಂಪರೆಗೆ ನಾಂದಿಯನ್ನು ಹಾಡಿ ಶ್ರೀದೇವಿಯನ್ನು ಸಾಕ್ಷಾತ್ಕಾರಿಸಿಕೊಂಡು ಜಿಲ್ಲೆಯ ಸಿದ್ಧಪರ್ವತದಲ್ಲಿ ಅಂಬಾದೇವಿಯನ್ನು ಪ್ರತಿಷ್ಠಾಪಿಸಿ ಶ್ರೀದೇವಿ ನೆಲೆಸುವಂತೆ ಮಾಡಿದ ಮಹಾತಪಸ್ವಿ ಮರಿಶಿವಯೋಗಿಗಳು ಎಲ್ಲರಿಗೂ ಆದರ್ಶವಾಗಿದ್ದಾರೆ ಎಂದರು.

ಜನಸಾಮಾನ್ಯರಿಗೆ ಶ್ರೀದೇವಿಯ ಉಪಾಸನೆಗೆ ಸರಳವಾದ ದಾರಿಯನ್ನು ತೋರಿದವರು ಚಿದಾನಂದ ಅವಧೂತರು. ಅವರ ಸಾಲಿನಲ್ಲಿ ಬಳಗಾನೂರು ಮಹಾತಪಸ್ವಿ ಮರಿಶಿವಯೋಗಿಗಳು ಸೇರಿದ್ದಾರೆ. ಜಗತ್ತಿನ ಕಲ್ಯಾಣಕ್ಕಾಗಿ ಅನೇಕ ಪವಾಡಗಳನ್ನು ತೋರಿದ್ದಾರೆ. ಶ್ರೀಗಳ ಜೀವನ ದರ್ಶನವನ್ನು ಪುರಾಣ ಪ್ರವಚನದ ಮೂಲಕ ಅಲಿಸುವುದರಿಂದ ಶಿವಯೋಗಿಗಳ ಕೃಪೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿನವ ಮಹಾಂತ ಸ್ವಾಮಿಗಳು ತಿಳಿಸಿದರು.

ಗಿಣಿವಾರದ ಶಿವಾಚಾರ್ಯ ಶಾಸ್ತ್ರಿಗಳು ಬಳಗಾನೂರು ಮಹಾತಪಸ್ವಿ ಮರಿಶಿವಯೋಗಿಗಳ ಪುರಾಣ ಪ್ರವಚನ ಮಾಡಿದರು. ಪಂಡಿತ ವಿರೂಪಾಕ್ಷಯ್ಯಸ್ವಾಮಿ ವಂದಲಿ ಗಾಯನ, ಸಿದ್ದಯ್ಯಸ್ವಾಮಿ ತಬಲಾ ಸಾತ್ ನೀಡಿದರು. ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮಿಗಳು, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಬಳಗನೂರು ಮರಿಶಿವಯೋಗಿಗಳ ಮಠದ ಸಿದ್ದಬಸವ ಮಹಾಸ್ವಾಮಿಗಳು, ಅರಳಿಹಳ್ಳಿ ಮಠದ ಶರಣಬಸವ ದೇವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net