

ಬೆಂಗಳೂರು: ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಅಭಿಮಾನಿಗಳು ರಾಜಧಾನಿ ಬೆಂಗಳೂರಿನಲ್ಲೂ ಇದ್ದಾರೆ. ಅಂತಹ ಯಕ್ಷ ಪ್ರೇಕ್ಷಕರ ಮನ ಸೆಳೆಯುವಲ್ಲಿ ಶ್ರೀದೇವಿ ಮಹಾತ್ಮೆ ಪ್ರಸಂಗ ಯಶಸ್ವಿಯಾಗಿದೆ.
ಕಮಲಶಿಲೆ ಶ್ರೀಬ್ರಾಹ್ಮಿ ದುರ್ಗಾಪರಮೇಶ್ವರಿ ಭಕ್ತಾದಿಗಳೆಲ್ಲಾ ಸೇರಿ ಬೆಂಗಳೂರಿನಲ್ಲಿ ಸಂಯೋಜಿಸಿದ ನಾಲ್ಕನೇ ವರ್ಷದ ಯಶಸ್ವಿ ಯಕ್ಷಗಾನ ಬಯಲಾಟವು ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು. ಇದೇ ಮೊದಲ ಬಾರಿಗೆ ಬಡಗುತಿಟ್ಟು ಪ್ರಕಾರ ಶ್ರೀದೇವಿ ಮಹಾತ್ಮೆ ಪ್ರಸಂಗವನ್ನು ಕಣ್ತುಂಬಿಕೊಂಡ ಭಕ್ತಾದಿಗಳು ಧನ್ಯತಾ ಭಾವದಲ್ಲಿ ತೇಲಾಡಿದರು.
ಕಮಲಶಿಲೆ ಯಕ್ಷಗಾನ ಮೇಳದ ಸಾಂಪ್ರದಾಯಿಕ ರಂಗಸ್ಥಳ ಮತ್ತು ಪುಷ್ಪಾಲಂಕೃತ ಬೆಳ್ಳಿ ತೊಟ್ಟಿಲ ಸೊಬಗಿನಲ್ಲಿ ಯಕ್ಷೋತ್ಸವ 2024 ಯಶಸ್ವಿಯಾಯಿತು.
ಹಿರಿಯ ಭಾಗವತ ಕಿಗ್ಗ ಹಿರಣ್ಣಯ್ಯ ಆಚಾರ್ ಮತ್ತು ಯುವ ಭಾಗವತ ಗಣೇಶ್ ಶೆಟ್ಟಿ ಬೆಪ್ಡಿ ಹಾಗೂ ಗಣೇಶ ಬಿಲ್ಯಾಡಿ ಸಮಾಗಮ ಪ್ರೇಕ್ಷಕರ ಸಂತಸವನ್ನು ಇಮ್ಮಡಿಗೊಳಿಸಿತು. ಚಂಡೆ-ಮದ್ದಳೆ ಮತ್ತು ಕಾಡು ದೇವಾಡಿಗರ ಅದ್ಭುತ ನಾದಸ್ವರದ ಜೇಂಕಾರ. ಮಧು-ಕೈಟಭ, ಚಂಡ-ಮುಂಡ, ಶುಂಭ ಮತ್ತು ಕಲಿ ರಕ್ತಬೀಜರ ಸಾಂಪ್ರದಾಯಕ ಬಡಗು ತಿಟ್ಟಿನ ವೇಷ ಮತ್ತು ಕುಣಿತ ನಗರದ ಪ್ರೇಕ್ಷಕರ ಮನಸೂರೆಗೊಳಿಸಿದೆ.
ಉಪ್ಪುಂದ ನಾಗೇಂದ್ರರ ವಿದ್ಯುನ್ಮಾಲಿ, ಮಹಿಷಾಸುರ, ಶ್ರೀದೇವಿ ಮತ್ತು 65 ವಯಸ್ಸಿನ ಕೊಚ್ಚಾಡಿ ರಾಮ ದೇವಾಡಿಗರ ರಕ್ತೇಶ್ವರಿ ಪಾತ್ರಗಳ ವೇಷಾಲಂಕಾರ ಮತ್ತು ಆಂಗೀಕ ಅಭಿನಯ ಯಶಸ್ವಿ ಪ್ರದರ್ಶನದ ಆಕರ್ಷಣೆಯಾಗಿತ್ತು.
ಪ್ರತಿಯೊಬ್ಬ ವೇಷದಾರಿಯ ರಂಗ ಚಟುವಟಿಕೆ, ವೇಷ ಭೂಷಣಗಳು, ಕಲಾ ನೈಪುಣ್ಯತೆ, ಕಲಾವಿದರ ತಾರಾ ಮೌಲ್ಯ ಮತ್ತು ಮನೋಜ್ಞ ಅಭಿನಯಕ್ಕೆ ಜನ ಚಪ್ಪಾಳೆಯ ಮಳೆಗರೆದರು.