ಬೆಟ್ಟದಲ್ಲಿ ಶ್ರೀಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

DSC_2786
Published on

ಮೈಸೂರು: ಕರೊನಾ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಸೋಮವಾರ ಅತ್ಯಂತ ಸರಳವಾಗಿ ಶ್ರೀಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಜರುಗಿತು.

ಮೂರನೇ ಆಷಾಢ ಶುಕ್ರವಾರದ ಬಳಿಕ ಅಮ್ಮನ ವರ್ಧಂತಿ ಮಹೋತ್ಸವ ಪ್ರತಿ ವರ್ಷ ಅದ್ಧೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ನಡೆಯುತ್ತಿತ್ತು.

ಮುಂಜಾನೆಯಿಂದಲೇ ದೇವಿಗೆ ಅಭ್ಯಂಜನ ಮಾಡಿಸಿ, ವಿಶೇಷ ಅಲಂಕಾರ ಮಾಡಿ ಬಳಿಕ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ನೈವೇದ್ಯ ನೆರವೇರಿಸಲಾಯಿತು. ಬಳಿಕ ದೇವಾಲಯದ ಪ್ರಾಂಗಣದಲ್ಲಿಯೇ ದೇವರ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು ಮೂರು ಬಾರಿ ಪ್ರದಕ್ಷಿಣೆ ಮಾಡಲಾಯಿತು.

ವರ್ಧಂತಿ ಮಹೋತ್ಸವದಲ್ಲಿ ರಾಜವಂಶಸ್ಥರು ಭಾಗಿಯಾಗಿ ಅಮ್ಮನ ಉತ್ಸವಕ್ಕೆ ಚಾಲನೆ ನೀಡುವುದು ವಾಡಿಕೆ. ಅಂತೆಯೇ ಬೆಟ್ಟಕ್ಕೆ ಆಗಮಿಸಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿ ದೇವಿಯ ದರ್ಶನ ಪಡೆದರಲ್ಲದೆ ಉತ್ಸವಕ್ಕೆ ಚಾಲನೆ ನೀಡಿದರು.

ಆಷಾಢ ಮಾಸದ ಕೃಷ್ಣಪಕ್ಷ ರೇವತಿ ನಕ್ಷತ್ರ ಸಪ್ತಮಿಯಂದು ನಡೆದ ವರ್ಧಂತಿ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳು ನಡೆದವು. ಕರೊನಾ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಜಿಲ್ಲಾಡಳಿತದ ಸೂಚನೆಯಂತೆ ಈಗಾಗಲೇ ಆಷಾಢ ಶುಕ್ರವಾರ, ವರ್ಧಂತಿ ಮಹೋತ್ಸವ ಹಾಗೂ ಮಂಗಳವಾರ ಕೂಡ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಯದುವೀರ್ ಅವರು, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಾಮುಂಡಿಬೆಟ್ಟದಲ್ಲಿ ಅಷಾಢದ ಕೃಷ್ಣಪಕ್ಷ ರೇವತಿ ನಕ್ಷತ್ರದಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಪ್ರತಿ ವರ್ಷ ವರ್ಧಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಬಾರಿ ಎಲ್ಲೆಡೆ ಕರೊನಾ ಭೀತಿ ಇರುವುದರಿಂದ ಇಂತಹ ಸಂಕಷ್ಟ ಸ್ಥಿತಿಯಲ್ಲಿ ಸಾರ್ವಜನಿಕರ ದರ್ಶನವನ್ನು ಸರ್ಕಾರ ನಿಷೇಧಿಸಿದೆ. ದೇವರು ಈ ಪರಿಸ್ಥಿತಿಯನ್ನು ಆದಷ್ಟು ಬೇಗ ಹೋಗಲಾಡಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಮಾತನಾಡಿ, ಸಾರ್ವಜನಿಕರ ಪ್ರವೇಶ ನಿರ್ಬಂಧ ಹೊರತುಪಡಿಸಿ ಉಳಿದಂತೆ ಎಲ್ಲ ಧಾರ್ಮಿಕ ಆಚರಣೆಗಳು ಎಂದಿನಂತೆ ನಡೆದಿವೆ. ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ನಡೆದಿದ್ದು, ರಾಜವಂಶಸ್ಥರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ದೇವರು ಕರೊನಾದಿಂದ ಮುಕ್ತಿ ದೊರಕಿಸುವಂತೆ ಪ್ರಾರ್ಥಿಸಲಾಗಿದೆ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

ಬೆಟ್ಟಕ್ಕೆ ನಿರ್ಬಂಧ: ಕರೊನಾ ಭೀತಿ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವರ್ಧಂತ್ಯುತ್ಸವಕ್ಕೆ ಸಾರ್ವಜನಿಕರ ಪ್ರವೇಶ ಇರಲಿಲ್ಲ. ಬೆಟ್ಟದ ಪ್ರವೇಶದ್ವಾರ, ಮೆಟ್ಟಿಲು ಭಾಗದಲ್ಲಿಯೇ ಪೊಲೀಸರು ಬ್ಯಾರಿಕೇಡ್‌ಅನ್ನು ಅಳವಡಿಸಿ ಯಾರೂ ಬೆಟ್ಟಕ್ಕೆ ಹೋಗದಂತೆ ತಡೆಯಲಾಗಿತ್ತು.

ಅಲ್ಲದೆ ಹಾಲಿ ಶಾಸಕರು, ಸಂಸದರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿ ಉಳಿದಂತೆ ಮಾಜಿ ಶಾಸಕರಿಗೆ, ಹಾಲಿ ನಗರ ಪಾಲಿಕೆ, ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರ ರಾಜಕೀಯ ಮುಖಂಡರು, ಗಣ್ಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಆರಂಭದಲ್ಲಿ ಮಾಧ್ಯಮದವರಿಗೂ ನಿರ್ಬಂಧ ವಿಧಿಸಲಾಗಿತ್ತು.

ಕಳೆದ ಆಷಾಢ ಶುಕ್ರವಾರದಲ್ಲಿ ಸಚಿವ ಈಶ್ವರಪ್ಪ ಅವರು ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ, ಸಂಸದ ಪ್ರತಾಪಸಿಂಹ ಸೇರಿದಂತೆ ಯಾರೂ ದೈಹಿಕ ಅಂತರ ಕಾಪಾಡಲಿಲ್ಲ ಎಂದು ವರದಿಯಾಗಿತ್ತು. ಹೀಗಾಗಿ ಈ ಬಾರಿ ಮಾಧ್ಯಮ ಪ್ರತಿನಿಧಿಗಳಿಗೂ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಕೆಲವರಿಗೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net